ನಮ್ಮ ಕನ್ನಡದ ಆಂಕರಿಂಗ್ ದುನಿಯಾದಲ್ಲಿ ಕೇಳಿಬರುವುದು ಒಂದೇ ಹೆಸರು ಅದು ಅನುಶ್ರೀ. ಜೀ ಕನ್ನಡ ವಾಹಿನಿಯಲ್ಲಿ ಆಂಕರಿಂಗ್ ಆಗಿ ತಮ್ಮ ಪಯಣವನ್ನು ಶುರು ಮಾಡಿದ ಅನುಶ್ರೀ ಇಲ್ಲಿಯವರೆಗೂ ಜೀ ವಾಹಿನಿಗಾಗಿಯೇ ದುಡಿಯುತ್ತಿದ್ದಾರೆ. ಮೂಲತಃ ಮಂಗಳೂರಿನವರಾದ ಇವರು ಮನೆಯ ಜವಾಬ್ದಾರಿಯನ್ನು ಹೊತ್ತು, ಸಾಕಷ್ಟು ಕನಸುಗಳೊಂದಿಗೆ ಬೆಂಗಳೂರು ಬಂದು ಸೇರಿದರು. ಆರಂಭದಲ್ಲಿ ಇವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಸಾಧನೆಯ ಹಾದಿಗೆ ಯಾವುದೇ ಶಾರ್ಟ್ ಕಟ್ ಇರುವುದಿಲ್ಲ. ರಾಜಮಾರ್ಗದಲ್ಲಿ ಸಹನೆ, ತಾಳ್ಮೆಯಿಂದ ನಮ್ಮ ನಡೆ ಗುರಿಯತ್ತ ಸಾಗಿದರೆ ಗೆಲುವು ಖಂಡಿತ ಎಂಬುದನ್ನು ಅನುಶ್ರೀ ಅವರು ಸಾಬೀತುಪಡಿಸಿದರು. ಅಂದು ಇರುವುದಕ್ಕೆ ಒಂದು ನೆಲೆಯಿಲ್ಲದೆ ಅಲೆದಾಡುತ್ತಿದ್ದ ಅನುಶ್ರೀಯವರು ಇಂದು ಆಂಕರಿಂಗ್ ಎಂದರೆ ಅನುಶ್ರೀ ಬೇರೆ ಯಾರು ಆಂಕರಿಂಗ್ ಮಾಡಲು ಆಗುವುದಿಲ್ಲ ಎಂಬಷ್ಟರಮಟ್ಟಿಗೆ ಸಾಧನೆಮಾಡಿದ್ದಾರೆ.

ಆಂಕರಿಂಗ್ ಮಾಡುವುದರ ಜೊತೆಜೊತೆಗೆ ಈ ಮೊದಲು ಅನುಶ್ರೀ ಅವರು ಕೆಲವು ಸಿನಿಮಾಗಳಲ್ಲೂ ನಟಿಸಿದ್ದರು. ಆದರೆ ಯಾವ ಸಿನಿಮಾಗಳು ನಿರೀಕ್ಷೆಯಷ್ಟು ಯಶಸ್ಸು ಮಾಡಲಿಲ್ಲ. ಹೀಗಾಗಿ ಮತ್ತೆ ಅಂಕ್ರಿಂಗ್ ನತ್ತ ಮುಖ ಮಾಡಿದ ಅನುಶ್ರೀಯವರು, ಇದೀಗ ಮತ್ತೆ ಬೆಳ್ಳಿಪರದೆಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಹೌದು ಮಮ್ಮಿ ಹಾಗೂ ದೇವಕಿ ಚಿತ್ರಗಳನ್ನು ನಿರ್ದೇಶಿಸಿ ಖ್ಯಾತಿಯಾಗಿರುವ ಲೋಹಿತ್ ಎಚ್ ಅವರು ಅನುಶ್ರೀ ಅವರ ಮುಂದಿನ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅನುಶ್ರೀ ಅವರು ನಟಿಸುತ್ತಿರುವ ಈ ಚಿತ್ರಕ್ಕೆ ಸೈತಾನ್ ಎಂದು ಹೆಸರಿಡಲಾಗಿದೆ. ಇತ್ತೀಚೆಗೆ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡ ಅನುಶ್ರೀ ಅವರು ನಾನು ನಿರೂಪಕಿಯಾಗಿ ಚಿತ್ರರಂಗಕ್ಕೆ ಬಂದಿದ್ದೆ. ಆಂಕರ್ ಅನುಶ್ರೀ ಅಂತಾನೆ ಹೆಸರು ಮಾಡಿರುವವಳು ನಾನು. ಲೋಹಿತ್ ಅವರ ನಿರ್ದೇಶನದ ಮಮ್ಮಿ ಚಿತ್ರವನ್ನು ನೋಡಿದ್ದೇನೆ. ಇಷ್ಟು ಚಿಕ್ಕ ವಯಸ್ಸಿಗೆ ಉತ್ತಮ ಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ.

ಸೈತಾನ್ ಚಿತ್ರದ ಶೀರ್ಷಿಕೆ ಕೂಡ ಕುತೂಹಲ ಹುಟ್ಟಿಸಿದೆ. ಮೊದಲು ಈ ಚಿತ್ರದಲ್ಲಿ ನಟಿಸಲು ನಾನು ನಿರಾಕರಿಸಿದ್ದೆ. ಆದರೆ ಕಥೆ ಕೇಳಿದ ನಂತರ ಈ ಚಿತ್ರ ಮಾಡಲು ಒಪ್ಪಿಕೊಂಡೆ ಎಂದು ಅನುಶ್ರೀ ಅವರು ಹೇಳಿದರು. ಎಸ್ ಎಮ್ ಪಿ ಪ್ರೊಡಕ್ಷನ್ ಹಾಗೂ ಲೋಹಿತ್ ಪ್ರೊಡಕ್ಷನ್ಸ್ ಅಡಿಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆ ಅನಾವರಣಗೊಂಡಿತ್ತು. ಅನುಶ್ರೀ ಅವರ ಜೊತೆಗೆ ಅದಿತಿ ಪ್ರಭುದೇವ, ಭಾವನಾ ರಾವ್, ಸಮಾಜಸೇವಕಿ ಮಮತಾ ದೇವರಾಜ್, ಯುವರಾಜ್, ಸಂಭಾಷಣಾಕಾರ ಮಾಸ್ತಿ ಮುಂತಾದವರು ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಲೋಹಿತ್ ಅವರ ಸಿನಿಮಾಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಪ್ರಭಾಕರ್ ಅವರು ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಫೆಬ್ರುವರಿ ಅಂತ್ಯದ ವೇಳೆಗೆ ಎರಡನೇ ಹಂತದ ಚಿತ್ರೀಕರಣ ಗೋವಾದಲ್ಲಿ ನಡೆಯಲಿದೆ ಎಂದು ಲೋಹಿತ್ ಅವರು ಹೇಳಿದರು. ಈ ಚಿತ್ರದಲ್ಲಿ ಅನುಶ್ರೀ ಅವರ ಜೊತೆಗೆ ಗೌತಮ್ ಬಿ ಎನ್, ಕೃತಿ, ಐಶ್ವರ್ಯ ಸಿಂಧೋಗಿ, ಸಾರಿಕಾ ರಾವ್, ಭಾರ್ಗವ್ ವೆಂಕಟೇಶ್, ಗ್ರೀಷ್ಮಾ ಶ್ರೀಧರ್, ಹರ್ಷ ಮುಂತಾದವರು ನಟಿಸಿದ್ದಾರೆ. ಉಪ್ಪು ಹುಳಿ ಖಾರ ಚಿತ್ರದ ನಂತರ ಸೈತಾನ್ ಚಿತ್ರದ ಮೂಲಕ ಮತ್ತೆ ರೀ ಎಂಟ್ರಿ ಕೊಡುತ್ತಿರುವ ಅನುಶ್ರೀ ಅವರು ಮೊದಲು ಈ ಚಿತ್ರವನ್ನು ಮಾಡಲು ನಿರಾಕರಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅನುಶ್ರೀಯವರು ನಾನು ಈ ಚಿತ್ರದಲ್ಲಿ ಅಭಿನಯಿಸಲು ಕಾರಣ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ. ಅವರು ನನಗೆ ಲೋಹಿತ್ ಅವರ ಪರಿಚಯ ಮಾಡಿಸಿದ್ದರು. ನಟನೆಯ ಬಗ್ಗೆ ನನಗೆ ಹೇಳಿದಾಗ ನಾನು ಬೇಡ ಎಂದು ಹೇಳಿದ್ದೆ. ಕಿರುತೆರೆಯಲ್ಲಿ ನಾನು ಆರಾಮಾಗಿದ್ದೇನೆ ಅಂತಲೂ ಹೇಳಿದ್ದೆ. ಆದರೆ ಚಿತ್ರದ ಕಥೆ ಕೇಳಿ ಒಪ್ಪಿಕೊಂಡೆ ಎಂದು ಹೇಳಿದರು.