ಅಂಗೈಯಲ್ಲಿ ಆರೋಗ್ಯ ಎನ್ನುವ ಹಾಗೆ ನಮ್ಮ ದಿನನಿತ್ಯದ ಚಟುವಟಿಕೆಗಳು ಕೂಡ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತವೆ ಎಂದರೆ ನೀವು ನಂಬಲೇಬೇಕು. ಆಯುರ್ವೇದದ ಅಧ್ಯಯನದ ಪ್ರಕಾರ ನಾವು ಸ್ನಾನಮಾಡುವ ನೀರಿನಿಂದಲೂ ಕೂಡ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೌದು ಕೆಲವರಿಗೆ ಬಿಸಿನೀರಿನ ಸ್ನಾನ ಮಾಡುವುದು ಅಭ್ಯಾಸ. ಬೇಸಿಗೆ ಕಾಲದಲ್ಲಿಯೂ ಕೂಡ ಬಿಸಿನೀರಿನಲ್ಲಿ ಸ್ನಾನ ಮಾಡುತ್ತಿರುತ್ತಾರೆ. ಇನ್ನು ಕೆಲವರಿಗೆ ತಣ್ಣೀರಿನ ಸ್ನಾನ ಮಾಡಿ ಅಭ್ಯಾಸ. ಚಳಿಗಾಲದಲ್ಲಿಯೂ ಕೂಡ ತಣ್ಣೀರಿನ ಸ್ನಾನವೇ ಮಾಡುತ್ತಿರುತ್ತಾರೆ. ಆದರೆ ಯಾವ ನೀರಿನಿಂದ ಸ್ನಾನ ಮಾಡುವುದರಿಂದ ನಮ್ಮ ದೇಹಕ್ಕೆ ಒಳ್ಳೆಯದು ಹಾಗೂ ಆರೋಗ್ಯ ಮತ್ತು ಚರ್ಮದ ಕಾಂತಿಯ ದೃಷ್ಟಿಯಿಂದ ಒಳ್ಳೆಯದು ಎಂಬುದನ್ನು ತಿಳಿಯಲು ಮುಂದೆ ಓದಿ.

ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ದೇಹದ ಮೇಲಿರುವ ಸೂಕ್ಷ್ಮಜೀವಿಗಳನ್ನು ಕೊಲ್ಲಲು ಸಹಾಯವಾಗುತ್ತದೆ. ಬಿಸಿ ನೀರಿನ ಸ್ನಾನದಿಂದ ಸ್ನಾಯುಗಳ ನೋವನ್ನು ಕಡಿಮೆ ಮಾಡಬಹುದು ಹಾಗೂ ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಬಿಸಿನೀರು ಸಹಾಯಕಾರಿಯಾಗಿದೆ. ಇದು ನಮ್ಮ ದೇಹ ಮಧುಮೇಹಕ್ಕೆ ಒಳಗಾಗುವುದನ್ನು ಕಡಿಮೆ ಮಾಡುತ್ತದೆ. ಕೆಮ್ಮು ಅಥವಾ ಶೀತಕ್ಕೆ ಒಳಗಾಗಿರುವವರು ಬಿಸಿನೀರಿನಿಂದ ಸ್ನಾನ ಮಾಡುವುದರಿಂದ ಗಂಟಲು ಹಾಗೂ ಮೂಗು ನಿರಾಳವಾಗುತ್ತವೆ. ತಣ್ಣೀರಿನ ಸ್ನಾನವು ನರತುದಿಗಳನ್ನು ಉತ್ತೇಜಿಸುತ್ತದೆ ಮತ್ತು ಸೋಮಾರಿತನವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ತಣ್ಣೀರಿನ ಸ್ನಾನವು ಶ್ವಾಸಕೋಶದ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುವುದಲ್ಲದೆ, ಖಿನ್ನತೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

ತಣ್ಣೀರಿನ ಸ್ನಾನದಿಂದ ದೇಹದ ದುಗ್ದರಸ ಮತ್ತು ಪ್ರತಿರಕ್ಷಣಾ ವ್ಯವಸ್ಥೆ ಉತ್ತೇಜನಗೊಳ್ಳುತ್ತದೆ. ಇದರಿಂದಾಗಿ ಸೋಂಕಿನ ವಿರುದ್ಧ ಹೋರಾಡುವ ಜೀವಕೋಶಗಳ ಉತ್ಪಾದನೆಯನ್ನು ಹೆಚ್ಚಿಸಬಹುದು. ಬಿಸಿನೀರು ಅಥವಾ ತಣ್ಣೀರು ಆಯ್ಕೆ ಮಾಡಿಕೊಳ್ಳುವ ಮೊದಲು ಋತು, ನಿಮ್ಮ ವಯಸ್ಸು, ಅಭ್ಯಾಸಗಳು, ರೋಗ ಇತ್ಯಾದಿಗಳನ್ನು ಗಮನಿಸಬೇಕು. ಯಾರಿಗೆ ಯಾವ ನೀರಿನ ಸ್ನಾನ ಹಿತ ಅಥವಾ ಅಹಿತ ಎಂಬುದನ್ನು ತಿಳಿಯಲು ಮುಂದೆ ಓದಿ. ಆಯುರ್ವೇದದ ಪ್ರಕಾರ ದೇಹಕ್ಕೆ ಬಿಸಿನೀರನ್ನು ಹಾಗೂ ತಲೆಗೆ ತಣ್ಣೀರನ್ನು ಬಳಸುವುದು ಉತ್ತಮ. ಏಕೆಂದರೆ ಕಣ್ಣು ಮತ್ತು ಕೂದಲಿಗೆ ಬಿಸಿ ನೀರಿನಿಂದ ತೊಳೆಯುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಯುವಕರು ತಣ್ಣೀರಿನಿಂದ ಸ್ನಾನ ಮಾಡುವುದು ಉತ್ತಮ ಮತ್ತು ವೃದ್ಧರು ಬಿಸಿ ನೀರಿನಿಂದ ಸ್ನಾನ ಮಾಡುವುದು ಉತ್ತಮ ಎಂದು ಆಯುರ್ವೇದದಲ್ಲಿ ಸೂಚಿಸಲಾಗುತ್ತದೆ.

ನಿಮ್ಮ ದೇಹವು ಪಿತ್ತವಾಗಿದ್ದರೆ ಸ್ನಾನಕ್ಕೆ ತಣ್ಣೀರು ಬಳಸುವುದು ಉತ್ತಮ. ನಿಮ್ಮ ದೇಹವು ಕಫ ಅಥವಾ ವಾತವಾಗಿದ್ದರೆ ಬಿಸಿ ನೀರನ್ನು ಬಳಸುವುದು ಉತ್ತಮ. ನೀವು ಅಜೀರ್ಣ ಅಥವಾ ಯಕೃತ್ತಿನ ಸಮಸ್ಯೆಗಳಿಂದ ಬಳಲುತ್ತಿದ್ದರೆ ತಣ್ಣೀರಿನ ಸ್ನಾನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಒಂದು ದಿನದಲ್ಲಿ ನೀವು ನಿಯಮಿತವಾಗಿ ಕೆಲಸಮಾಡುತ್ತಿದ್ದರೆ, ಹೆಚ್ಚು ಬೆವರುವಂತವರಾಗಿದ್ದರೆ ಬಿಸಿನೀರಿನ ಸ್ನಾನವನ್ನು ಸೂಚಿಸಲಾಗುತ್ತದೆ. ಬೆಳಗ್ಗೆ ತಣ್ಣೀರಿನಿಂದ ಸ್ನಾನಮಾಡುವುದು, ರಾತ್ರಿಯ ಸಮಯದಲ್ಲಿ ಬಿಸಿನೀರಿನಿಂದ ಸ್ನಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಆಯುರ್ವೇದದ ಪ್ರಕಾರ ಅವಸರದ ಸ್ನಾನವು ಅವಸರದ ಆಹಾರಕ್ಕೆ ಹೋಲುತ್ತದೆ.

ನೀವು ಅವಸರವಾಗಿ ಸ್ನಾನ ಮಾಡುವವರಾಗಿದ್ದರೆ ನಿಮ್ಮ ದೇಹವು ಎಲ್ಲ ಪ್ರಯೋಜನಗಳನ್ನು ಪಡೆಯುವುದಿಲ್ಲ. ನೀವು ತಣ್ಣೀರಿನಿಂದ ಸ್ನಾನ ಮಾಡುವವರಾಗಿದ್ದರೆ ಸ್ನಾನಮಾಡುವ ವಿಧಾನವು ತಲೆಯಿಂದ ಪಾದದವರೆಗೆ ಇರಬೇಕು. ನೀವು ಬಿಸಿನೀರಿನಿಂದ ಸ್ನಾನ ಮಾಡುವವರಾಗಿದ್ದರೆ ಮೊದಲು ನಿಮ್ಮ ಕಾಲ್ಬೆರಳುಗಳನ್ನು ತೊಳೆಯುವ ಮೂಲಕ ಪ್ರಾರಂಭಿಸಿ ನಂತರ ತಲೆಗೆ ಮೇಲಕ್ಕೆ ಸರಿಸಿ. ಸ್ನಾನಕ್ಕೆ ಮೊದಲು ಎಣ್ಣೆಯಿಂದ ಮಸಾಜ್ ಮಾಡುವುದರಿಂದ ನಮ್ಮ ದೇಹದ ಸ್ನಾಯುಗಳು ಪುನರುಜ್ಜೀವನಗೊಳ್ಳುತ್ತವೆ ಹಾಗೂ ಇದು ಚರ್ಮದ ವಿನ್ಯಾಸವನ್ನು ಸುಧಾರಿಸುತ್ತದೆ. ಸ್ನಾನದ ನೀರಿಗೆ ಕೆಲವು ಬೇವಿನ ಎಲೆಗಳನ್ನು ಸೇರಿಸುವುದರಿಂದ ಚರ್ಮದ ಆರೋಗ್ಯವನ್ನು ಸುಧಾರಿಸಬಹುದು.