ಒಂದೇ ಚಿತ್ರಕ್ಕೆ ಬದಲಾಯ್ತು ಪುಷ್ಪಾ ಖ್ಯಾತಿಯ ನಟ ಅಲ್ಲು ಅರ್ಜುನ್ ಅವರ ಅದೃಷ್ಟ

ಸ್ಟೈಲಿಂಗ್ ಸ್ಟಾರ್ ಅಲ್ಲೂ ಅರ್ಜುನ್ ಅವರ ಪುಷ್ಪ ಸಿನಿಮಾದ ನಂತರ ಅಲ್ಲು ಅರ್ಜುನ್ ಅವರ ಬೇಡಿಕೆ ಎಲ್ಲೆಡೆ ಹೆಚ್ಚಾಗಿದೆ. ಸದ್ಯಕ್ಕೆ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಎಲ್ಲೆಡೆ ನಡೆಯುತ್ತಿದೆ. ಹಿಂದೆ ಒಂದು ಭಾಷೆಯಲ್ಲಿ ಒಂದು ಸಿನಿಮಾ ಹಿಟ್ ಆದರೆ ಆ ಸಿನಿಮಾ ಬೇರೆ ಭಾಷೆಗಳಿಗೆ ರಿಮೇಕ್ ಆಗುತ್ತಿದ್ದವು. ಆದರೆ ಈಗ ಎಲ್ಲಾ ಸ್ಟಾರ್ ನಟರ ಸಿನಿಮಾಗಳು ಎಲ್ಲ ಭಾಷೆಗಳಿಗೂ ಡಬ್ ಆಗಿ ಏಕಕಾಲದಲ್ಲಿ ರಿಲೀಸಾಗುತ್ತಿವೆ. ಇದರಿಂದ ನಟರಿಗೆ ಭಾರತದಾದ್ಯಂತ ಅಭಿಮಾನಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟೈಲಿಂಗ್ ಸ್ಟಾರ್ ಎಂದೇ ಖ್ಯಾತಿಯಾಗಿದ್ದ ಅಲ್ಲು ಅರ್ಜುನ್ ಅವರಿಗೆ ಇದೀಗ ಬಾಲಿವುಡ್ ನಲ್ಲಿ ಸಾಕಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಯಾವ ನಟನ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿರುತ್ತಾರೋ ಅಂತಹ ನಟರನ್ನು ಹಾಕಿಕೊಂಡು ನಿರ್ದೇಶಕರು ಸಿನಿಮಾ ಮಾಡುತ್ತಾರೆ.

ಅಂದಾಗ ಮಾತ್ರ ಚಿತ್ರದ ಕಲೆಕ್ಷನ್ ಭರ್ಜರಿಯಾಗಿರುತ್ತದೆ. ಇದೀಗ ಬಾಲಿವುಡ್ ನಲ್ಲೂ ಅಲ್ಲು ಅರ್ಜುನ್ ಅವರ ಬೇಡಿಕೆ ಹೆಚ್ಚಾಗಿದೆ. ಇದಕ್ಕೆ ಕಾರಣ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿದ ಪುಷ್ಪ ಚಿತ್ರ ತೆಲುಗು ಮಾತ್ರವಲ್ಲದೆ ತಮಿಳು, ಕನ್ನಡ, ಮಲಯಾಳಂ, ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಿತ್ತು. ಅಲ್ಲು ಅರ್ಜುನ್ ಪುಷ್ಪ ಚಿತ್ರದಲ್ಲಿ ತಮ್ಮ ಅಭಿನಯದಿಂದ ಭಾರತದಾದ್ಯಂತ ಸುದ್ದಿ ಮಾಡಿದ್ದರು. ಮೂಲಗಳ ಪ್ರಕಾರ ಹಿಂದಿ ಭಾಷೆಗೆ ಡಬ್ ಆದ ಪುಷ್ಪ ಸಿನಿಮಾ ಮೂಲ ಹಿಂದಿ ಸಿನಿಮಾಗಳು ಗಳಿಸುವುದಕ್ಕಿಂತ ಹೆಚ್ಚು ಹಣಗಳಿಸಿ ದಾಖಲೆ ಬರೆದಿದೆಯಂತೆ. ಇದರಿಂದಾಗಿ ಅಲ್ಲು ಅರ್ಜುನ್ ಅವರು ತೆಲುಗೇತರ ಪ್ರದೇಶಗಳಲ್ಲೂ ಸ್ಟಾರ್ ಆಗಿ ಬಿಟ್ಟಿದ್ದಾರೆ. ಬಾಲಿವುಡ್ನ ಸ್ಟಾರ್ ನಟರ ಸಿನಿಮಾಗಳು ಮಾಡುವ ಕಲೆಕ್ಷನ್ ನನ್ನು ಅಲ್ಲು ಅರ್ಜುನ್ ಅವರ ಹಿಂದಿಗೆ ಡಬ್ ಆದ ಪುಷ್ಪ ಸಿನಿಮಾ ಮಾಡಿ ತೋರಿಸಿದೆ.

ಈ ಮೂಲಕ ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳಿಗೆ ಭಾರತದ ಯಾವುದೇ ಭಾಷೆಯಾದರೂ ಬೇಡಿಕೆ ಇದ್ದೇ ಇರುತ್ತದೆ ಎಂಬುದನ್ನು ಖಾತ್ರಿಪಡಿಸಿದಂತಾಗಿದೆ. ಪುಷ್ಪ ಸಿನಿಮಾದ ಮೂಲಕ ಪ್ಯಾನ್ ಇಂಡಿಯನ್ ಸ್ಟಾರ್ ಆಗಿರುವ ಅಲ್ಲು ಅರ್ಜುನ್ ಅವರಿಗೆ ಬಾಲಿವುಡ್ ನಿಂದಲೂ ಸಾಕಷ್ಟು ಆಫರ್ ಗಳು ಬರುತ್ತಿವೆ. ಕೆಲವು ದೊಡ್ಡ ನಿರ್ಮಾಣ ಸಂಸ್ಥೆಗಳು ಅಲ್ಲು ಅವರನ್ನು ಬಾಲಿವುಡ್ ಗೆ ಕರೆ ತರಲು ಪ್ರಯತ್ನಿಸುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅಲ್ಲು ಅರ್ಜುನ್ ಅವರು ಬಾಲಿವುಡ್ ಪ್ರವೇಶಿಸುತ್ತಾರಾ ಎಂಬ ಪ್ರಶ್ನೆ ಎಲ್ಲರಿಗೂ ಇತ್ತು. ಇದೀಗ ಈ ಅನುಮಾನ ನಿಜವೆಂಬಂತೆ ಇತ್ತೀಚೆಗೆ ಅಲ್ಲು ಅರ್ಜುನ್ ಅವರು ಬಾಲಿವುಡ್ ನ ಖ್ಯಾತ ನಿರ್ದೇಶಕರೊಬ್ಬರನ್ನು ಭೇಟಿ ಮಾಡಿದ್ದಾರೆ. ಹೌದು ನಟ ಅಲ್ಲು ಅರ್ಜುನ್ ಮುಂಬೈಗೆ ಹೋಗಿದ್ದು ಅಲ್ಲಿ ಸ್ಟಾರ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರನ್ನು ಭೇಟಿಯಾಗಿದ್ದಾರೆ ಎಂಬ ಮಾಹಿತಿ ದೊರಕಿದೆ.

ಇವರಿಬ್ಬರೂ ಸಿನಿಮಾ ವಿಚಾರಕ್ಕಲ್ಲದೆ ಬೇರೆ ವಿಚಾರಕ್ಕೆ ಭೇಟಿಯಾಗಲು ಸಾಧ್ಯವೇ ಇಲ್ಲ. ಅವರು ಖಂಡಿತವಾಗಿ ಮುಂದಿನ ಸಿನಿಮಾಗಾಗಿ ಭೇಟಿಯಾಗಿದ್ದಾರೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಪುಷ್ಪ2 ಚಿತ್ರದ ಮೇಲೆ ಗಮನಹರಿಸಿರುವ ಅಲ್ಲು ಅರ್ಜುನ್, ಪುಷ್ಪ 2 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಗಂಗೂಬಾಯಿ ಕಾಠಿಯಾವಾಡಿ ಚಿತ್ರದ ಸಕ್ಸಸ್ ನ ಖುಷಿಯಲ್ಲಿರುವ ಸಂಜಯ್ ಲೀಲಾ ಬನ್ಸಾಲಿ ಅವರು ನಂತರ ಬೈಜು ಬವರಾ ಸಿನಿಮಾದ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರು ನಾಲ್ಕನೇ ಬಾರಿ ರಣವೀರ್ ಸಿಂಗ್ ಅವರೊಂದಿಗೆ ಕೆಲಸ ಮಾಡಲಿದ್ದಾರೆ. ಇದಾದ ಬಳಿಕ ಎಲ್ಲವು ಅಂದುಕೊಂಡಂತೆ ಆದರೆ ಅಲ್ಲು ಅರ್ಜುನ್ ಮತ್ತು ಸಂಜಯ್ ಲೀಲಾ ಬನ್ಸಾಲಿ ಅವರ ಕಾಂಬಿನೇಷನ್ ಚಿತ್ರಗಳನ್ನು ನೋಡಲು ಸಾಧ್ಯ.

ಕೆಲವು ದಿನಗಳ ಹಿಂದೆ ತೆಲುಗಿನ ಜನಪ್ರಿಯ ನಿರ್ದೇಶಕ ರಾಜಮೌಳಿ ಅವರು ಕೂಡ ಮುಂಬೈನಲ್ಲಿ ಕಾಣಿಸಿಕೊಂಡಿದ್ದರು. ಅವರು ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಿದ್ದರು ಎಂದು ತಿಳಿದಿತ್ತು. ತ್ರಿಬಲ್ ಆರ್ ಸಿನಿಮಾದ ಬಳಿಕ ಮಹೇಶ್ ಬಾಬು ಅವರ ಜೊತೆ ಹೊಸ ಸಿನಿಮಾ ಮಾಡಲಿರುವ ರಾಜಮೌಳಿ ಅವರು ಆ ಬಳಿಕ ಸಲ್ಮಾನ್ ಖಾನ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡಬಹುದೇ ಎಂಬ ಕುತೂಹಲವಿದೆ. ಒಂದು ವೇಳೆ ತೆಲುಗು ನಿರ್ದೇಶಕ ರಾಜಮೌಳಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡಿದರೆ ಮತ್ತು ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ತೆಲುಗು ನಟ ಅಲ್ಲು ಅರ್ಜುನ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡಿದರೆ, ಒಂದು ಒಳ್ಳೆಯ ಸಿನಿಮಾ ಮಾಡಲು ಯಾವುದೇ ಭಾಷೆಯ ಮಿತಿಯಿಲ್ಲ ಎಂಬುದನ್ನು ಖಾತ್ರಿಪಡಿಸಿದಂತಾಗುತ್ತದೆ.

%d bloggers like this: