ದೇಶ ಸೇವೆಯೇ ಈಶ ಸೇವೆ ಎಂಬ ಮಾತು ಸರ್ವ ಕಾಲಕ್ಕೂ ಸರ್ವ ದೇಶಗಳಿಗೂ ಅನ್ವಯವಾಗುವಂತದ್ದು. ಹೌದು ನಮ್ಮ ದೇಶಕ್ಕೆ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸುವುದೇ ಈಶ್ವರನಿಗೆ ಅಥವಾ ದೇವರಿಗೆ ಸೇವೆ ಮಾಡಿದಂತೆ ಎಂಬುದು ಇದರ ತಾತ್ಪರ್ಯ. ಅದರಲ್ಲೂ ಜೀವಪಣಕ್ಕಿಟ್ಟು ದೇಶ ಕಾಯುವ ಯೋಧರ ಸೇವೆ ಬೇರಾವುದಕ್ಕೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಇಂತಹ ದೇಶಸೇವೆಗಾಗಿ ನಮ್ಮ ಕರ್ನಾಟಕದ ಒಂದು ಪುಟ್ಟ ಹಳ್ಳಿ ಬಹುತೇಕ ಪ್ರತಿಯೊಂದು ಮನೆಯಿಂದ ಯೋಧರನ್ನು ದೇಶಕ್ಕೆ ಕೊಟ್ಟಿದೆ. ಹೌದು ಆ ಗ್ರಾಮ ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯ ಕಲೆವಾಳ ಗ್ರಾಮ. ಹಾವೇರಿ ಜಿಲ್ಲೆಯ ಸವನೂರು ತಾಲ್ಲೂಕಿನಲ್ಲಿರುವ ಒಂದು ಗ್ರಾಮ ನಿಜಕ್ಕೂ ದೇಶಸೇವೆಗೆ ಹೆಸರುವಾಸಿ ಆಗಿದೆ. ಈ ಗ್ರಾಮದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಮನೆಗಳಿದ್ದು ಸರಿ ಸುಮಾರು ನಾಲ್ಕೂವರೆ ಸಾವಿರ ಜನಸಂಖ್ಯೆ ಇದೆ. ಕೆಲವೇ ಕೆಲವು ಮನೆಗಳಿರುವ ಈ ಗ್ರಾಮದಲ್ಲಿ ಪ್ರತಿಯೊಂದು ಮನೆಯಿಂದ ಒಬ್ಬರು ಇಬ್ಬರು ದೇಶಸೇವೆ ಮಾಡಿದ ಪುಣ್ಯ ಪಡೆದಿದ್ದಾರೆ. ಸದ್ಯದ ಸಮಯ ಪರಿಗಣಿಸುವುದಾದರೆ ಸುಮಾರು ನೂರಕ್ಕೂ ಅಧಿಕ ಜನ ದೇಶಸೇವೆಯಲ್ಲಿ ನಿರತರಾಗಿದ್ದಾರೆ.
ಅನೇಕ ಜನ ದೇಶಸೇವೆ ಮಾಡಿ ನಿವೃತ್ತರಾಗಿ ಗ್ರಾಮದಲ್ಲಿ ಬಂದು ನೆಲೆಸಿದ್ದಾರೆ. ಈ ನಿವೃತ್ತಿಯಾಗಿ ಬಂದ ಸೈನಿಕರು ಸುಮ್ಮನೆ ಕೂರುವುದಿಲ್ಲ. ಬದಲಾಗಿ ಗ್ರಾಮದಲ್ಲಿನ ಯುವಕರಲ್ಲಿ ದೇಶಪ್ರೇಮದಂತಹ ಮನೋಭಾವನೆಗಳನ್ನು ಹುಟ್ಟುಹಾಕುತ್ತಾರೆ ಮತ್ತು ಅಷ್ಟೇ ಅಲ್ಲದೆ ಉಚಿತವಾಗಿ ಯುವಕರಿಗೆ ಸೈನಿಕ ಆಗಲು ಬೇಕಾದ ದೈಹಿಕ ಸಾಮರ್ಥ್ಯದ ತರಬೇತಿಯನ್ನು ನೀಡುತ್ತಾರೆ ಹೀಗಾಗಿ ಬಹುತೇಕ ಗ್ರಾಮದ ಯುವಕರು ಸೇನೆಯಲ್ಲಿ ಆಯ್ಕೆಯಾಗುತ್ತಾರೆ. ಯುದ್ಧದಲ್ಲಿ ಮಗ ಅಥವಾ ಗಂಡನನ್ನು ಕಳೆದುಕೊಂಡರೂ ಇಲ್ಲಿನ ಮಹಿಳೆಯರು ಹೆಮ್ಮೆಯಿಂದ ಜೀವನ ಸಾಗಿಸುತ್ತಿದ್ದಾರೆ. ಈ ಗ್ರಾಮ ತನ್ನ ನಿಸ್ವಾರ್ಥ ಸೇವೆಯಿಂದ ಬೇರೆ ಎಲ್ಲ ಗ್ರಾಮಗಳಿಗೂ ಮಾದರಿಯಾಗಿದೆ. ಆ ಗ್ರಾಮದ ಪ್ರತಿಯೊಬ್ಬರಿಗೂ ನಮ್ಮದೊಂದು ಪುಟ್ಟ ನಮನ.