ಕನ್ನಡ ಚಿತ್ರರಂಗದ ಖ್ಯಾತ ನಟರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ನೋಡೋಣ. ಕನ್ನಡ ಸಿನಿ ರಂಗದ ಸ್ಟಾರ್ ನಟರಾದ ಇವರಿಬ್ಬರು ಹಾಗು ಇವರ ಜೊತೆಗೆ ತೆಲುಗು ಚಿತ್ರರಂಗದ ಖ್ಯಾತ ನಟ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಈಗ ಒಂದಾಗುತ್ತಿದ್ದಾರೆ. ಹೌದು ಪವರ್ ಸ್ಟಾರ್ ಪುನೀತ್ ಅವರಿಗೆ ರಕ್ಷಿತ್ ಶೆಟ್ಟಿ ಮತ್ತು ವಿಜಯ್ ದೇವರಕೊಂಡ ಸಾಥ್ ನೀಡುತ್ತಿದ್ದಾರೆ, ಅರೆರೆ ಈ ಮೂವರು ಸೇರಿ ಚಿತ್ರ ಮಾಡುತ್ತಿದ್ದಾರೆ ಎಂದು ಊಹಿಸಬೇಡಿ.

ಸಂತೋಷ್ ಆನಂದ್ ರಾಮ್ ನಿರ್ದೇಶನದ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಚಿತ್ರ ಬಹುತೇಕ ಶೂಟಿಂಗ್ ಕಂಪ್ಲೀಟ್ ಮಾಡಿದ್ದು ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಚಿತ್ರೀಕರಣ ಶುರುವಾದಾಗಿನಿಂದಲೂ ಕನ್ನಡ ಚಿತ್ರರಂಗದ ಬಹಳ ವೈಟಿಂಗ್ ಲಿಸ್ಟ್ ನಲ್ಲಿರುವ ಚಿತ್ರಗಳ ಪೈಕಿ ಯುವರತ್ನ ಕೂಡ ಒಂದು. ರಾಜಕುಮಾರ ಎಂಬ ಆಲ್ ಟೈಮ್ ಹಿಟ್ ಚಿತ್ರ ನೀಡಿದ ಸಂತೋಷ್ ಆನಂದರಾಮ್ ಮತ್ತು ಪುನೀತ್ ಜೋಡಿ ಮತ್ತೆ ಯಾವ ರೀತಿ ತೆರೆಯ ಮೇಲೆ ಮೋಡಿ ಮಾಡಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಯುವರತ್ನ ಚಿತ್ರ ಇದೀಗ ಒಂದು ಹಾಡಿನ ಮೂಲಕ ಸುದ್ದಿ ಮಾಡುತ್ತಿದೆ. ಹೌದು ನೀನಾದೆನಾ ಎಂಬ ಯುವರತ್ನ ಚಿತ್ರದ ಹಾಡನ್ನು ನಾಳೆ 12 ಗಂಟೆ 5 ನಿಮಿಷಕ್ಕೆ ಭರ್ಜರಿಯಾಗಿ ಬಿಡುಗಡೆ ಮಾಡಲಾಗುತ್ತಿದೆ. ಈ ವಿಶೇಷ ಸಂಭ್ರಮಕ್ಕಾಗಿ ರಕ್ಷಿತ್ ಶೆಟ್ಟಿ ಮತ್ತು ವಿಜಯ ದೇವರಕೊಂಡ ಅಪ್ಪು ಅವರಿಗೆ ಜೊತೆಯಾಗಿದ್ದಾರೆ. ನೀನಾದೆನಾ ಹಾಡು ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿದರೆ ತೆಲುಗಿನಲ್ಲಿ ಇದೆ ಹಾಡಿನ ಅವತರಣಿಕೆಯನ್ನು ವಿಜಯ್ ದೇವರಕೊಂಡ ರಿಲೀಸ್ ಮಾಡಲಿದ್ದಾರೆ.

ಕನ್ನಡ ಸೇರಿದಂತೆ ಟಾಲಿವುಡ್ ನಲ್ಲಿ ಯುವರತ್ನ ಸಿನಿಮಾ ಬಿಡುಗಡೆಯಾಗುತ್ತಿರುವ ಕಾರಣ ಚಿತ್ರತಂಡ ಎರಡು ಭಾಷೆಗಳಲ್ಲಿ ಚಿತ್ರ ಮತ್ತು ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುತ್ತಿದೆ. ಬಹುಭಾಷಾ ನಟಿ ಸಯ್ಯೇಶ ಸೈಗಲ್ ಪವರ್ ಸ್ಟಾರ್ ಪುನೀತ್ ಅವರಿಗೆ ನಾಯಕ ನಟಿಯಾಗಿ ಅಭಿನಯಿಸುತ್ತಿದ್ದು ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಎಲ್ಲ ಪರಿಸ್ಥಿತಿ ಅಂದುಕೊಂಡಂತೆ ಕೂಡಿ ಬಂದರೆ ಯುವರತ್ನ ಚಿತ್ರ ಮುಂದಿನ ವರ್ಷ ತೆರೆಗೆ ಭರ್ಜರಿಯಾಗಿ ಅಪ್ಪಳಿಸಲಿದೆ.