ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಚಿತ್ರವನ್ನು ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಜೇಮ್ಸ್ ಚಿತ್ರದ ಫಸ್ಟ್ ಲುಕ್ ಹಾಗೂ ಟೀಸರ್ ನಿಂದಲೇ ಥ್ರಿಲ್ ಆಗಿರುವ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು, ಸಿನಿಮಾ ನೋಡಲು ಕಾದು ಕುಳಿತಿದ್ದಾರೆ. ಜೇಮ್ಸ್ ಚಿತ್ರವು ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರವಾದ್ದರಿಂದ ಈ ಚಿತ್ರದ ಮೇಲೆ ನಿರೀಕ್ಷೆಗಳು ನೂರೆಂಟಿವೆ. ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದಂದು ಜೇಮ್ಸ್ ಬಿಡುಗಡೆಯಾಗುತ್ತಿರುವುದರಿಂದ ಅಪ್ಪು ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ. ಪುನೀತ್ ಅವರ ಕೊನೆಯ ಸಿನಿಮಾವನ್ನು ಅವರ ಹುಟ್ಟುಹಬ್ಬದಂದು ಅದ್ದೂರಿಯಾಗಿ ಬಿಡುಗಡೆ ಮಾಡಬೇಕು ಎಂದು ಚಿತ್ರತಂಡ ಪಣತೊಟ್ಟಿದೆ.

ಹೀಗಾಗಿ ಚಿತ್ರದ ಕೆಲಸಗಳು ಭರದಿಂದ ಸಾಗಿವೆ. ಜೇಮ್ಸ್ ಚಿತ್ರದ ಟೀಸರ್ ಬಿಡುಗಡೆಯಾಗುವುದಕ್ಕೂ ಮುನ್ನ ನಿರ್ದೇಶಕ ಬಹದ್ದೂರ್ ಚೇತನ್ ಅವರು ಮೆಗಾ ಪ್ರೀ ರಿಲೀಸ್ ಕಾರ್ಯಕ್ರಮ ಮಾಡುವುದಾಗಿ ಹೇಳಿದ್ದರು. ಈ ಮಾತಿನಂತೆ ಜೇಮ್ಸ್ ಚಿತ್ರತಂಡ ಬಿಡುಗಡೆಗೂ ಮುನ್ನವೇ ಅದ್ದೂರಿ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಾಗಿದೆ. ಈ ಕಾರ್ಯಕ್ರಮಕ್ಕೆ ತೆಲುಗು ಚಿತ್ರರಂಗದ ಇಬ್ಬರು ಘಟಾನುಗಟಿ ನಟರು ಅತಿಥಿಗಳಾಗಿ ಬರುತ್ತಿದ್ದಾರೆ ಎಂದು ಸುದ್ದಿ ಹರಡಿದೆ. ಹೌದು ಇಷ್ಟು ವರ್ಷ ಅಪ್ಪು ಅವರು ಚಿತ್ರರಂಗಕ್ಕೆ ಮಾಡಿದ ಸೇವೆಗೆ ಸರಿಯಾದ ನ್ಯಾಯ, ಜೇಮ್ಸ್ ಚಿತ್ರದ ಮೂಲಕ ಸಿಗಲೇಬೇಕು ಎಂದು ಅಭಿಮಾನಿಗಳು ನಿರ್ಧರಿಸಿದ್ದಾರೆ. ಈ ಕಾರಣಕ್ಕೆ ಜೇಮ್ಸ್ ಚಿತ್ರತಂಡ ಸಾಕಷ್ಟು ಪ್ಲಾನ್ ಗಳನ್ನು ಮಾಡಿಕೊಂಡಿವೆ. ಇನ್ನೊಂದು ವಿಶೇಷತೆಯೆಂದರೆ ಜೇಮ್ಸ್ ಚಿತ್ರವು 5ಭಾಷೆಗಳಿಗೆ ಡಬ್ ಆಗಲಿದೆ.

ಕನ್ನಡದಲ್ಲಿ ಪ್ರಮುಖವಾಗಿ ಬಿಡುಗಡೆಯಾದರೂ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೆ ಚಿತ್ರ ಡಬ್ ಆಗಲಿದೆ. ಮಾರ್ಚ್ 17ರಂದು ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದಂದು ಏಕಕಾಲಕ್ಕೆ ಎಲ್ಲಾ ಭಾಷೆಗಳಲ್ಲೂ ಜೇಮ್ಸ್ ಚಿತ್ರ ಬಿಡುಗಡೆಯಾಗಲಿದೆ. ಜೇಮ್ಸ್ ಚಿತ್ರದ ರಿಲೀಸ್ ಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇರುವುದರಿಂದ, ಐದು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಮಾಡಲು ಚಿತ್ರತಂಡವು ಭರ್ಜರಿ ತಯಾರಿ ನಡೆಸುತ್ತಿದೆ. ಜೇಮ್ಸ್ ಚಿತ್ರವನ್ನು ಅದ್ದೂರಿಯಾಗಿ ರಿಲೀಸ್ ಮಾಡಲು ಅಭಿಮಾನಿಗಳು ಕೂಡ ಹಲವಾರು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಜೇಮ್ಸ್ ಚಿತ್ರ ರಿಲೀಸ್ ಆಗುವ ಥಿಯೇಟರ್ ಮುಂದೆ ಅಪ್ಪು ಅವರು ಇದುವರೆಗೆ ಅಭಿನಯಿಸಿದ 30ಸಿನಿಮಾಗಳ ಕಟ್ ಔಟ್ ಸೇರಿದಂತೆ.

ರಾಜ್ಯಾದ್ಯಂತ ಹತ್ತು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಹೆಲಿಕ್ಯಾಪ್ಟರ್ ಮೂಲಕ ವೀರೇಶ್ ಚಿತ್ರಮಂದಿರ ಹಾಗೂ ಅಪ್ಪು ಸಮಾಧಿಯ ಮೇಲೆ ಪುಷ್ಪಾಂಜಲಿ ಹಾಕಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಒಟ್ಟಾರೆಯಾಗಿ ಜೇಮ್ಸ್ ಚಿತ್ರದ ಬಿಡುಗಡೆಯ ದಿನ ಅಪ್ಪು ಅಭಿಮಾನಿಗಳ ಸಂಭ್ರಮ ಜೋರಾಗಿರುತ್ತದೆ. ಇನ್ನೂ ಮಾರ್ಚ್ 6ರಂದು ಹೊಸಪೇಟೆಯಲ್ಲಿ ಜೇಮ್ಸ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಮೆಗಾಸ್ಟಾರ್ ಚಿರಂಜೀವಿ ಮತ್ತು ಜೂನಿಯರ್ ಎನ್.ಟಿ.ಆರ್ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಸೋಶಿಯಲ್ ಮೀಡಿಯಾ ಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಹಾಗೂ ಕನ್ನಡದಿಂದ ದರ್ಶನ್ ಅವರು ಗೆಸ್ಟ್ ಆಗಿ ಬರಲಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ ಕಾರ್ಯಕ್ರಮ ಹೊಸಪೇಟೆಯಲ್ಲಿ ನಡೆಯುತ್ತಿರುವುದಂತೂ ನಿಜ. ಆದರೆ ಚಿರಂಜೀವಿ ಹಾಗೂ ಎನ್.ಟಿ.ಆರ್ ಬರುತ್ತಾರಾ ಇಲ್ಲವಾ ಎನ್ನುವುದು ಗೊತ್ತಾಗಬೇಕಿದೆ.