ರಮೇಶ್ ಅರವಿಂದ್ ಅವರ ಜೀವನದಲ್ಲಿ ಬಹು ದೊಡ್ಡ ಬದಲಾವಣೆ ತಂದ ಈ ಹಿಟ್ ಚಿತ್ರಕ್ಕೆ ಈಗ 25 ವರ್ಷ

ಚಂದನವನದ ಈ ಎವರ್ಗ್ರೀನ್ ಮೂವಿಗೆ ಇದೀಗ ಇಪ್ಪತ್ತೈದು ವಸಂತಗಳ ಸಂಭ್ರಮ, ವರ್ಷಕ್ಕೆ ನೂರಾರು ಸಿನಿಮಾಗಳು ತಯಾರಾಗುತ್ತವೆ. ಅವುಗಳಲ್ಲಿ ಕೆಲವು ಗೆಲ್ಲುತ್ತವೆ. ಇನ್ನೂ ಕೆಲವು ಸಾಧಾರಣ ಅನಿಸಿಕೊಂಡು ಬದಿಗೆ ಸರಿಯುತ್ತವೆ. ಆದರೆ ಕೆಲವೇ ಕೆಲವು ಸಿನಿಮಾಗಳು ಮಾತ್ರ ಎಷ್ಟೇ ಪೀಳಿಗೆ ಬದಲಾದರೂ ಅದರ ಅಸ್ತಿತ್ವ ಸತ್ವಗಂಧವನ್ನು ಹಾಗೇ ಉಳಿಸಿಕೊಂಡು ಬಿಡುತ್ತವೆ. ಅಂತಹ ಸಿನಿಮಾಗಳ ಪೈಕಿ ಅಮೃತ ವರ್ಷಿಣಿ ಸಿನಿಮಾ ಕೂಡ ಒಂದಾಗಿದೆ. ಹೌದು ಕನ್ನಡ ಸಿನಿ ಪ್ರೇಕ್ಷಕರ ಮನದಲ್ಲಿ ಇಂದಿಗೂ ಕೂಡ ಹಚ್ಚ ಹಸರಾಗಿ ಉಳಿದುಕೊಂಡಿರುವ ರಮೇಶ್ ಅರವಿಂದ್, ಸುಹಾಸಿನಿ ಮತ್ತು ಶರತ್ ಬಾಬು, ನಿವೇದಿತಾ ಮುಖ್ಯಭೂಮಿಕೆಯ ಅಮೃತ ವರ್ಷಿಣಿ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದ ಚಿತ್ರ. ಚಿತ್ರದ ಕಥೆ, ಕಥೆಯಲ್ಲಿ ಬರುವ ಕೆಲವೇ ಕೆಲವು ಪಾತ್ರಗಳು, ಅವುಗಳ ನಿರೂಪಣೆಯ ವಿಧಾನ, ಕಲಾವಿದರ ನಟನೆ, ಸಾಹಿತ್ಯ, ಸಂಗೀತ ಹೀಗೆ ಪ್ರತಿಯೊಂದರಲ್ಲಿಯೂ ಕ್ಲಾಸಿಕ್ ಆಗಿದ್ದ ಅಮೃತ ವರ್ಷಿಣಿ ಸಿನಿಮಾ ಕನ್ನಡ ಸಿನಿ ಪ್ರೇಕ್ಷಕರನ್ನು ಸಖತ್ ಮೋಡಿ ಮಾಡಿತು.

ಅಮೃತ ವರ್ಷಿಣಿ ಸಿನಿಮಾ ನಟ ರಮೇಶ್ ಅರವಿಂದ್ ಅವರ ಸಿನಿ ವೃತ್ತಿ ಜೀವನಕ್ಕೆ ಬಹುದೊಡ್ಡ ತಿರುವು ಕೊಟ್ಟ ಚಿತ್ರ. ಹಾಗಾಗಲೇ ಅನೇಕ ಲವ್ ಸ್ಟೋರಿ ಸಿನಿಮಾಗಳಲ್ಲಿ ನಟಿಸಿ ತ್ಯಾಗರಾಜ ಅಂತಾನೇ ಹೆಸರು ಮಾಡಿದ್ದ ರಮೇಶ್ ಅರವಿಂದ್ ಅವರಿಗೆ ಅಮೃತ ವರ್ಷಿಣಿ ಸಿನಿಮಾದಲ್ಲಿ ಕಂಪ್ಲಿಟ್ ನೆಗೆಟೀವ್ ರೋಲ್ ಅವರ ನಟನಾ ಶೈಲಿಯನ್ನೇ ಬದಲಾಯಿಸಿ ಬಿಡುವಷ್ಟು ಜನಪ್ರಿಯತೆ ತಂದುಕೊಟ್ಟಿತು ಅಮೃತ ವರ್ಷಿಣಿ ಸಿನಿಮಾ. 1997 ರಲ್ಲಿ ದಿನೇಶ್ ಬಾಬು ಅವರ ನಿರ್ದೆಶನದಲ್ಲಿ ಮೂಡಿಬಂದ ಅಮೃತ ವರ್ಷಿಣಿ ಸಿನಿಮಾ ಒಂದು ಆದರ್ಶ ದಂಪತಿಗಳ ನವಿರಾದ ಪ್ರೇಮಕಥೆಯಾಗಿತ್ತು.

ಆದರ್ಶ ದಂಪತಿಗಳಾಗಿ ನಟಿ ಸುಹಾಸಿನಿ, ನಟ ಶರತ್ ಬಾಬು ಅತ್ಯಂತ ಸಹಜವಾಗಿ ನಟಿಸಿದ್ದರು. ಇವರಿಬ್ಬರ ಸುಂದರ ಸಂಸಾರದಲ್ಲಿ ಬರುವ ಆಪ್ತ ಗೆಳೆಯ ಅಭಿಷೇಕ್ ಪಾತ್ರದಲ್ಲಿ ನಟ ರಮೇಶ್ ಅರವಿಂದ್ ಜೀವ ತುಂಬಿ ನಟಿಸಿದ್ದರು. ಈ ಮೂವರು ನಟರ ಕಣ್ಣೋಟದ ನಟನೆಗೆ ಪ್ರೇಕ್ಷಕರು ತಲೆದೂಗಿದರು. ಇನ್ನು ಈ ಅಮೃತ ವರ್ಷಿಣಿ ಸಿನಿಮಾದ ಬಹುದೊಡ್ಡ ಶಕ್ತಿ ಅಂದರೆ ಕೆ.ಕಲ್ಯಾಣ್ ಅವರ ಸಾಹಿತ್ಯ, ಎಸ್.ಪಿ.ಬಾಲಸುಬ್ರಮಣ್ಯಂ ಅವರ ಧ್ವನಿ, ದೇವ ಅವರ ರಾಗ ಸಂಯೋಜನೆ ಈ ಎಲ್ಲವೂ ಅಮೃತ ವರ್ಷಿಣಿ ಚಿತ್ರದ ಜೀವಾಳವಾಗಿತ್ತು.

ಇನ್ನು ಅಮೃತ ವರ್ಷಿಣಿ ಸಿನಿಮಾಗೆ ರಾಜ್ಯ ಪ್ರಶಸ್ತಿ ಮತ್ತು ಫಿಲ್ಮ್ ಫೇರ್ ಪ್ರಶಸ್ತಿಗಳು ಕೂಡ ಲಭಿಸಿತು. ಅಷ್ಟೇ ಅಲ್ಲದೆ ಈ ಸಿನಿಮಾ ತೆಲುಗು,ತಮಿಳು ಮತ್ತು ಮಲೆಯಾಳಂ ಭಾಷೆಗೂ ಕೂಡ ರಿಮೇಕ್ ಆಗಿ ಸೂಪರ್ ಹಿಟ್ ಆಯಿತು. ಇದೀಗ ಈ ಎವರ್ಗೀನ್ ಮೂವಿಗೆ 25 ವರ್ಷಗಳ ಸಂಭ್ರಮ. ಈ ಹಿನ್ನೆಲೆ ನಟ ರಮೇಶ್ ಅರವಿಂದ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಮೃತ ವರ್ಷಿಣಿ ಸಿನಿಮಾ ಯಶಸ್ಸಿಗೆ ಕಾರಣರಾದ ಚಿತ್ರದಲ್ಲಿ ಭಾಗಿದಾರರಾದಂತಹ ಕಲಾವಿದರು,ತಂತ್ರಜ್ಞರನ್ನ ಸ್ಮರಿಸಿಕೊಂಡು ಪೋಸ್ಟ್ ವೊಂದನ್ನ ಶೇರ್ ಮಾಡಿದ್ದಾರೆ.

ಬ್ಲ್ಯಾಕ್ ಅಂಡ್ ವೈಟ್ ಫೋಟೋ ಶೇರ್ ಮಾಡಿಕೊಂಡಿರುವ ನಟ ರಮೇಶ್ ಅರವಿಂದ್ ಅವರು ವಾಲ್ ನಲ್ಲಿ ಅಮೃತ ವರ್ಷಿಣಿಗೆ ಇಂದು 25 ವರ್ಷ. ಜಯಶ್ರೀ ದೇವಿ, ದಿನೇಶ್ ಬಾಬು, ಸುಹಾಸಿನಿ, ಶರತ್ ಬಾಬು, ನಿವೇದಿತಾ, ದೇವಾ, ಕಲ್ಯಾಣ್, ಚಿತ್ರ, ನನ್ನ ಪ್ರೀತಿಯ ಎಸ್.ಪಿ.ಬಿ ಸರ್ ಅವರಿಗೆ ನಾನು ಚಿರ ಋಣಿ. ಇಷ್ಟು ವರ್ಷಗಳ ಕಾಲ ಪ್ರೀತಿ ತೋರಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ನಟ ಹಾಗೂ ನಿರ್ದೇಶಕ ರಮೇಶ್ ಅರವಿಂದ್ ಬರೆದುಕೊಂಡಿದ್ದಾರೆ ಮತ್ತು ಸಂತೋಷ ಹಂಚಿಕೊಂಡಿದ್ದಾರೆ.

%d bloggers like this: