ಸ್ಯಾಂಡಲ್ ವುಡ್ ಮನ ಮೆಚ್ಚಿದ ಹುಡುಗಿಗೆ ಇದೀಗ ಡಾಕ್ಟರೇಟ್ ಗೌರವ, 80-90 ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿ ಕನ್ನಡ ಚಿತ್ರರಂಗವನ್ನು ಆಳಿದ ನಟಿ ಸುಧಾರಾಣಿ ಅವರು ಇನ್ಮುಂದೆ ಡಾಕ್ಟರ್ ಸುಧಾರಾಣಿ ಎಂದು ಕರೆಸಿಕೊಳ್ಳಲಿದ್ದಾರೆ. 1973 ರಲ್ಲಿ ಜನಿಸಿದ ಸುಧಾರಾಣಿ ಅವರ ಮೂಲ ಹೆಸರು ಜಯಶ್ರೀ. ನಟಿ ಸುಧಾರಾಣಿ ಅವರು ಕೇವಲ ಕನ್ನಡ ಮಾತ್ರವಲ್ಲದೆ ತೆಲುಗು, ತುಳು ಮತ್ತು ಮಲೆಯಾಳಂ ಸಿನಿಮಾಗಳಲ್ಲಿಯೂ ಕೂಡ ಬಣ್ಣ ಹಚ್ಚಿದ್ದಾರೆ.1978 ರಲ್ಲಿ ಕೆ.ಎಸ್.ಆರ್.ದಾಸ್ ಅವರ ನಿರ್ದೇಶನದಲ್ಲಿ ಸಾಹಸ ಸಿಂಹ ವಿಷ್ಣು ವರ್ಧನ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಿಲಾಡಿ ಕಿಟ್ಟು ಎಂಬ ಚಿತ್ರದಲ್ಲಿ ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸುಧಾರಾಣಿ ಅವರು 1986 ರಲ್ಲಿ ಶಿವರಾಜ್ ಕುಮಾರ್ ಅವರ ಚೊಚ್ಚಲ ಚಿತ್ರ ಆನಂದ್ ಚಿತ್ರದ ಮೂಲಕ ನಾಯಕಿ ನಟಿಯಾಗಿ ಸ್ಯಾಂಡಲ್ ವುಡ್ ಅಂಗಳಕ್ಕೆ ಹೆಜ್ಜೆ ಇಟ್ಟರು.

ಆನಂದ್ ಸಿನಿಮಾ ಸೂಪರ್ ಹಿಟ್ ಆಯಿತು. ಶಿವರಾಜ್ ಕುಮಾರ್ ಮತ್ತು ಸುಧಾರಾಣಿ ಜೋಡಿ ಸಿನಿ ಪ್ರೇಕ್ಷಕರಿಗೆ ಮೋಡಿ ಮಾಡಿತು. ಮತ್ತೆ ಈ ಜೋಡಿ ಮನಮೆಚ್ಚಿದ ಹುಡುಗಿ ಎಂಬ ಚಿತ್ರದಲ್ಲಿ ಜೊತೆಯಾಗಿ ನಟಿಸಿತು. ಈ ಜೋಡಿ ನಟಿಸಿದ ಸಿನಿಮಾಗಳು ಸೂಪರ್ ಹಿಟ್ ಆಗಿ ಕ್ಯೂಟ್ ಕಪಲ್ ಯಶಸ್ವಿ ಜೋಡಿ ಎಂಬ ಹೆಸರು ಗಳಿಸಿತು. ಹೀಗೆ ರಣರಂಗ, ಪಂಚಮ ವೇದ, ಕೃಷ್ಣ ನೀ ಕುಣಿದಾಗ, ಮೈಸೂರು ಮಲ್ಲಿಗೆ, ಮನೆದೇವ್ರ, ಮಣ್ಣಿನ ದೋಣಿ, ಅನುರಾಗ ಸಂಗಮ, ಕಾವ್ಯ ಅಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡುವ ಮೂಲಕ ಕನ್ನಡ ಚಿತ್ರರಂಗದ ಯಶಸ್ವಿ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡರು.

ಅಷ್ಟೇ ಅಲ್ಲದೆ ಪರಭಾಷಾ ನಟಿಯರಿಗೆ ಕಂಠದಾನ ಮಾಡುವ ಮೂಲಕ ಕಂಠದಾನ ಕಲಾವಿದೆಯಾಗಿಯೂ ಕೂಡ ಹೆಸರುವಾಸಿಯಾಗಿದ್ದಾರೆ. ಇನ್ನು ಇತ್ತೀಚೆಗೆ ಯುವರತ್ನ ಚಿತ್ರದಲ್ಲಿಯೂ ಕೂಡ ಸುಧಾರಾಣಿ ನಟಿಸಿದ್ದರು. ಸದ್ಯಕ್ಕೆ ಶರಣ್ ಅಭಿನಯದ ಅವತಾರ್ ಪುರುಷ ಸಿನಿಮಾದಲ್ಲಿಯೂ ಕೂಡ ನಟಿಸಿದ್ದಾರೆ. ಹೀಗೆ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಸುಧಾರಾಣಿ ಅವರ ಕಲಾಸೇವೆಯನ್ನು ಪರಿಗಣಿಸಿ ಡಾಕ್ಟರೇಟ್ ಗೌರವ ನೀಡಲಾಗಿದೆ.

ಈ ಬಗ್ಗೆ ಸ್ವತಃ ನಟಿ ಸುಧಾರಾಣಿ ಅವರೇ ತಮಗೆ ಇಂಡಿಯನ್ ಎಂಪೈರ್ ವಿಶ್ವ ವಿದ್ಯಾಲಯಯ ಸಹಯೋಗದೊಂದಿಗೆ ಯೂನಿವರ್ಸಲ್ ಡೆವಲಪ್ ಮೆಂಟ್ ಕೌನ್ಸಿಲ್ ನಿಂದ ತಮ್ಮ ಕಲಾಕ್ಷೇತ್ರದ ಸೇವೆ ಗುರುತಿಸಿ ಡಾಕ್ಟರೇಟ್ ಗೌರವ ಸಿಕ್ಕಿರುವ ಸಂತೋಷದ ವಿಚಾರವನ್ನು ಅವಾರ್ಡ್ ಸ್ವೀಕರಿಸುತ್ತಿರುವ ಫೋಟೋವೊಂದನ್ನ ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಅವರ ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಅವರ ಸ್ನೇಹಿತರು ಅಭಿನಂದನೆ ತಿಳಿಸಿದ್ದಾರೆ.