ಸ್ಯಾಂಡಲ್ ವುಡ್ ಸುಪ್ರಸಿದ್ದ ಪ್ರತಿಭಾವಂತ ನಟ, ಕಲಾ ನಿರ್ದೇಶಕನ ಪುತ್ರಿ ಇದೀಗ ಗಾಯನದ ಜೊತೆಗೆ ನಟನೆಯಲ್ಲಿಯೂ ಕೂಡ ತೊಡಗಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇದೀಗ ಹಳೇ ಬೇರು ಹೊಸ ಚಿಗುರು ಎಂಬಂತೆ ಅನೇಕ ಹಿರಿಯ ಕಲಾವಿದರ ಮಕ್ಕಳು ಚಂದನವನಕ್ಕೆ ಒಂದಲ್ಲ ಒಂದು ವಿಭಾಗಕ್ಕೆ ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ. ಶಿವರಾಜ್ ಕುಮಾರ್ ಕಿರಿಯ ಪುತ್ರಿ ಪ್ರೊಡಕ್ಷನ್ ನತ್ತ ಹೆಜ್ಜೆ ಇಟ್ಟರೆ, ಸಾಧುಕೋಕಿಲ ಪುತ್ರ ತಂದೆಯಂತೆ ಸಂಗೀತದ ಕಡೆ ಆಸಕ್ತಿ ತೋರಿದ್ದಾರೆ. ಅದರಂತೆ ಇದೀಗ ಕನ್ನಡದ ಖ್ಯಾತ ನಟ ಮತ್ತು ಕಲಾ ನಿರ್ದೇಶಕ ರಾದಂತಹ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಗಾಯನದ ಜೊತೆಗೆ ನಟನೆಯತ್ತಲೂ ಗಮನ ಹರಿಸಿದ್ದಾರೆ.

ಈಗಾಗಲೇ ಶರಣ್ ಅಭಿನಯದ ರ್ಯಾಂಬೋ2 ಸಿನಿಮಾದಲ್ಲಿ ದಮ್ ಮಾರೋ ಎಂಬ ಹಾಡನ್ನು ತನ್ನ ಕಂಚಿನ ಕಂಠದಿಂದ ಹಾಡುವ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು. ಇದಾದ ಬಳಿಕ ಪನ್ನಾಗಭರಣ ನಿರ್ದೇಶನದಲ್ಲಿ ಮೂಡಿಬಂದ ದ್ಯಾನೀಶ್ ಸೇಠ್ ನಾಯಕತ್ವದ ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ಸಾವಧಾನ ಬೆಂಗಳೂರು ಎಂಬ ಹಾಡಿನ ಮೂಲಕ ಕನ್ನಡ ಚಿತ್ರರಂಗದ ಭರವಸೆಯ ಗಾಯಕಿ ಎಂದು ಗುರುತಿಸಿಕೊಂಡ ಅದಿತಿ ಸಾಗರ್ ಇದೀಗ ನಟನೆಯತ್ತ ಹೊರಳಿದ್ದಾರೆ. ಅದೂ ಕೂಡ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಮೂರು ಸುಮಾರು ಚಿತ್ರಗಳಲ್ಲಿ ಬಣ್ಣ ಹಚ್ಚಲಿದ್ದಾರೆ. ಹೌದು ಗಾಯಕಿಯಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪರಿಚಯವಾದ ಅಧಿತಿ ಸಾಗರ್ ಇದೀಗ ಎ.ಹರ್ಷ ಮತ್ತು ಶಿವರಾಜ್ ಕುಮಾರ್ ಕಾಂಬಿನೇಶನ್ ನಲ್ಲಿ ಮೂಡಿ ಬರಲಿರುವ ವೇದ ಚಿತ್ರದಲ್ಲಿ ಪ್ರಮುಖ ಪಾತ್ರವನ್ನ ನಿರ್ವಹಿಸಲಿದ್ದಾರೆ ಅದಿತಿ ಸಾಗರ್.

ಅಷ್ಟೆ ಅಲ್ಲದೆ ಶಿವರಾಜ್ ಕುಮಾರ್ ನಟನೆಯ ನೀ ಸಿಗೋವರೆಗೂ ಮತ್ತು ಭೈರಾಗಿ ಸಿನಿಮಾದಲ್ಲಿಯೂ ಕೂಡ ಬಣ್ಣ ಹಚ್ಚಲಿದ್ದಾರೆ. ಒಟ್ಟಾರೆಯಾಗಿ ನಟ ಅರುಣ್ ಸಾಗರ್ ಪುತ್ರಿ ಅಧಿತಿ ಸಾಗರ್ ತನ್ನ ತಂದೆಯಂತೆ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಗಾಂಧಿನಗರದ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್ ಕೂಡ ಬಣ್ಣದ ಲೋಕಕ್ಕೆ ಹೆಜ್ಜೆ ಇಡುವುದಾಗಿ ಈ ಹಿಂದೆ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಅದೂ ಕೂಡ ವಿಲನ್ ಆಗಿಯೇ ಸ್ಯಾಂಡಲ್ ವುಡ್ಗೆ ಎಂಟ್ರಿಕೊಡುತ್ತೇನೆ ಎಂದು ತಮ್ಮ ಇಚ್ಚೆ ತಿಳಿಸಿದ್ದರು. ಒಟ್ಟಾರೆಯಾಗಿ ಅರುಣ್ ಸಾಗರ್ ಅವರ ಕುಟುಂಬದಿಂದ ಇಬ್ಬರು ಕಲಾವಿದರು ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.