ತಮ್ಮ ನಿರ್ದೇಶನದ ಮೊದಲ ಚಿತ್ರ ಗೆದ್ದ ಖುಷಿಯಲ್ಲಿ ದುನಿಯಾ ವಿಜಯ್ ಅವರಿಂದ ಮತ್ತೊಂದು ಹೊಸ ಚಿತ್ರ ಘೋಷಣೆ

ದುನಿಯಾ ವಿಜಯ್ ತಮ್ಮ ಮೊದಲ ನಿರ್ದೇಶನದ ಸಲಗ ಚಿತ್ರದ ಯಶಸ್ಸಿನ ನಂತರ ಮತ್ತೊಂದು ಸಿನಿಮಾಗೆ ಕೈಹಾಕಿದ್ದಾರೆ. ಹೌದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ದುನಿಯಾ ವಿಜಯ್ ಅವರು ತಾವು ನಟಿಸಿ, ನಿರ್ದೇಶಿಸುತ್ತಿರುವ ಹೊಸ ಚಿತ್ರದ ಟೈಟಲ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಚಿತ್ರದ ಫೋಟೋ ಒಂದರಲ್ಲಿ ಅರ್ಧ ಮುಖವನ್ನು ಕಪ್ಪು ಬಟ್ಟೆಯಿಂದ ಕವರ್ ಮಾಡಿರುವ ನಟನ ಹಣೆಯ ಮೇಲೆ ಗಾಯದ ಕಲೆಗಳಿದ್ದು, ಕೆಣಕುವ ಲುಕ್ ನಲ್ಲಿ ದುನಿಯಾ ವಿಜಯ್ ಘರ್ಜಿಸುವಂತೆ ನೋಡುತ್ತಿದ್ದಾರೆ. ಸಲಗ ಚಲನಚಿತ್ರದಲ್ಲಿ ರೌಡಿಸಂ ಕಥೆಯನ್ನು ತೆರೆಯಮೇಲೆ ದುನಿಯಾ ವಿಜಯ್ ತೋರಿಸಿದ್ದರು. ಈ ಸಿನಿಮಾದ ಬಗ್ಗೆ ಎಲ್ಲಾ ಕಡೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಚಿತ್ರವನ್ನು ವೀಕ್ಷಿಸಿದ ಅನೇಕ ನಟರು ವಿಜಯ್ ಅವರನ್ನು ಹೊಗಳಿದ್ದರು.

ಸಲಗ ಚಿತ್ರದ ಯಶಸ್ಸಿನಿಂದ ದುನಿಯಾ ವಿಜಯ್ ಅವರ ಕಾನ್ಫಿಡೆನ್ಸ್ ಹೆಚ್ಚಾದಂತಿದೆ. ಹೀಗಾಗಿ ಹೊಸ ಚಿತ್ರದ ನಿರ್ದೇಶನಕ್ಕೆ ಇಳಿದಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಫಸ್ಟ್ ಲುಕ್ ಪೋಸ್ಟ್ ಒಂದನ್ನು ರಿಲೀಸ್ ಮಾಡಿಕೊಂಡಿದ್ದಾರೆ. ದುನಿಯಾ ವಿಜಯ್ ಅವರು ನಟಿಸಿ ನಿರ್ದೇಶಿಸುತ್ತಿರುವ ಈ ಚಿತ್ರ ಅವರ 28ನೇ ಸಿನಿಮಾ ಆಗಲಿದೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ವಿಜಯ್ ಅವರು ಮತ್ತೊಮ್ಮೆ ನಿಮ್ಮ ಆಶೀರ್ವಾದದೊಂದಿಗೆ ಎಂದು ಬರೆದುಕೊಂಡಿದ್ದರು. ಇನ್ನು ಈ ಚಿತ್ರದ ಹೆಸರನ್ನು ಭೀಮಾ ಎಂಬ ಶೀರ್ಷಿಕೆ ಹಾಗೂ ಕೆಣಕದಿದ್ದರೆ ಕ್ಷೇಮ ಎಂಬ ಉಪ ಶೀರ್ಷಿಕೆಯೊಂದಿಗೆ ಬಿಡುಗಡೆ ಮಾಡಲಾಗಿದೆ. ಈ ಚಿತ್ರವನ್ನು ಕೃಷ್ಣ ಸಾರ್ಥಕ ಮತ್ತು ಜಗದೀಶ್ ಗೌಡ ನಿರ್ಮಿಸುತ್ತಿದ್ದಾರೆ. ಕಥೆ ಚಿತ್ರಕಥೆ ವಿಜಯ್ ಅವರೇ ಬರೆಯುತ್ತಿದ್ದಾರೆ.

ಸಂಭಾಷಣಾಕಾರರಾಗಿ ಮಾಸ್ತಿ ಇದ್ದಾರೆ. ಶಿವಸೇನಾ ಕ್ಯಾಮೆರಾ, ಚರಣ್ ರಾಜ್ ಸಂಗೀತ ಸಂಯೋಜನೆ ನೀಡಿದ್ದಾರೆ. ಹೊಸ ಪೋಸ್ಟರ್ ನಲ್ಲಿ ಕೈ ಹಾಗೂ ಯಮಹಾ ಆರ್.ಎಕ್ಸ್ 100 ಬೈಕ್ ತೋರಿಸಲಾಗಿತ್ತು ಮತ್ತು ಪೋಸ್ಟರ್ನಲ್ಲಿ ವಿಜಯ್ ಅವರ ಕೈ ರಕ್ತಸಿಕ್ತವಾಗಿತ್ತು. ಇತ್ತೀಚೆಗಷ್ಟೇ ನಡೆದ ಸಲಗ ಸಿನಿಮಾ ಸಕ್ಸಸ್ ಮೀಟ್ ನಲ್ಲಿ ದುನಿಯಾ ವಿಜಯ್ ಅವರು ವೇದಿಕೆಯ ಮೇಲೆ ಮಾತನಾಡುತ್ತಾ ಭಾವುಕರಾಗಿ ಕಣ್ಣೀರು ಹಾಕಿದ್ದರು. ನಾನು ಸಲಗ ಚಿತ್ರವನ್ನು ನಿರ್ಮಿಸುವಂತೆ ಕೆಪಿ ಶ್ರೀಕಾಂತ್ ಅವರನ್ನು ಕೇಳಲು ಹೋದಾಗ ನನ್ನ ಬಳಿ ದೇವರಾಣೆ ಸತ್ಯ ಹೇಳುತ್ತೇನೆ 40ರೂಪಾಯಿ ಇತ್ತು. ಇಂದಿಗೂ 40 ರೂಪಾಯಿಯನ್ನು ಫೋಟೋ ತೆಗೆದು ಫ್ರೇಮ್ ಹಾಕಿಸಿ ಇಟ್ಟುಕೊಂಡಿದ್ದೇನೆ ಎಂದು ದುನಿಯಾ ವಿಜಯ್ ಹೇಳಿದರು.

ಸದ್ಯಕ್ಕೆ ಟಾಲಿವುಡ್ ನಲ್ಲಿ ನಂದಮೂರಿ ಬಾಲಕೃಷ್ಣ ಅವರ ಜೊತೆ ಸಿನಿಮಾ ಮಾಡುತ್ತಿರುವ ವಿಜಯ್ ಅವರು, ನನ್ನ ಮೊದಲ ನಿರ್ದೇಶನದ ಸಲಗ ಚಿತ್ರಕ್ಕೆ ಪ್ರೇಕ್ಷಕರು ಕೊಟ್ಟ ಗೆಲುವನ್ನು ನಾನು ಎಂದಿಗೂ ಮರೆಯುವುದಿಲ್ಲ. ಅದೇ ಪ್ರೀತಿ ಮತ್ತು ಅಭಿಮಾನದಿಂದ ಮತ್ತೊಂದು ಸಿನಿಮಾ ಮಾಡುತ್ತಿದ್ದೇನೆ. ರಕ್ತ ಮತ್ತು ಲಾಂಗಿನ ಚಿತ್ರಣಗಳನ್ನು ಒಳಗೊಂಡ ಚಿತ್ರ ಅಲ್ಲ ನಮ್ಮದು. ಡಾರ್ಕ್ ಲೋಕದ ಕಥೆಯಾದರೂ ಅದನ್ನು ತೆರೆಯ ಮೇಲೆ ನೋಡುವ ಪ್ರೇಕ್ಷಕನಿಗೆ ಬ್ರೈಟ್ ಲೋಕದ ದರ್ಶನವಾಗುತ್ತದೆ. ಪಾಸಿಟಿವ್ ಕತೆ ಹೇಳಬೇಕು ಎಂಬುದು ನನ್ನ ಆಸೆ. ಏಳೆಂಟು ತಿಂಗಳಿಂದ ಚಿತ್ರದ ಕೆಲಸ ಆರಂಭವಾಗಿದೆ. ಈ ನಡುವೆ ನಾನು ತೆಲುಗು ಚಿತ್ರದ ಶೂಟಿಂಗ್ ನಲ್ಲಿ ಬಿಸಿ ಆಗಿದ್ದೇನೆ. ಒಂದು ವಾರದ ಶೂಟಿಂಗ್ ಆಗಿದೆ. ತೆಲುಗು ಸಿನಿಮಾ ಶೂಟಿಂಗ್ ಜೊತೆಗೆ ಭೀಮ ಚಿತ್ರದ ಬರವಣಿಗೆ ಕೂಡ ನಡೆಯಲಿದೆ ಎಂದು ವಿಜಯ್ ಹೇಳಿದ್ದಾರೆ.

%d bloggers like this: