ತಂದೆ ಆದ ಸಂಭ್ರಮದಲ್ಲಿ ಕ್ರಿಕೆಟರ್ ಯುವರಾಜ್ ಸಿಂಗ್

ಮಾಜಿ ಕ್ರಿಕೆಟಿಗ, ಸಿಕ್ಸರ್ ಕಿಂಗ್ ಎನಿಸಿಕೊಂಡಿರುವ ಯುವರಾಜ್ ಸಿಂಗ್, ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಪಂಜಾಬ್ ಮೂಲದ ಯುವರಾಜ್, ಸಿಕ್ಸರ್ ಕಾ ಬಾಪ್ ಎನಿಸಿಕೊಂಡವರು. ಸೋಲುವ ಮ್ಯಾಚ್ ಗಳನ್ನೂ ಕೂಡ ತಮ್ಮ ಸಿಕ್ಸರ್ ಮೂಲಕ ಗೆಲುವಿನ ಹಾದಿಯತ್ತ ಕೊಂಡೊಯ್ದ ಹಿರಿಮೆ ಇವರಿಗಿದೆ. ಅಕ್ಟೋಬರ್ 2000 ರಲ್ಲಿ ಏಕದಿನ ಪಂದ್ಯ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ್ದ ಯುವರಾಜ್, ಭಾರತದ ಪರವಾಗಿ 304 ಏಕದಿನ, 40 ಟೆಸ್ಟ್ ಹಾಗೂ 58 ಟಿ ಟ್ವೆಂಟಿ ಪಂದ್ಯಗಳನ್ನು ಆಡಿದ್ದಾರೆ. 2011 ರ ವಿಶ್ವಕಪ್ ಗೆಲುವಿನ ರೂವಾರಿ ಎನಿಸಿಕೊಂಡಿರುವ ಯುವರಾಜ್, 2019 ಜೂನ್ 10 ರಂದು ಅಂತಾರಾಷ್ಟ್ರೀಯ ಕ್ರಿಕೆಟಿಗೆ ಗುಡ್ ಬೈ ಹೇಳಿದ್ದರು.

ಯುವರಾಜ್ ಹಲವು ವಿಚಾರಗಳಿಗೆ ಸುದ್ದಿಯಲ್ಲಿರುತ್ತಾರೆ. 2007 ರ ಟಿ 20 ಮ್ಯಾಚ್ ನಲ್ಲಿ 6 ಬಾಲ್ ಗಳಿಗೆ 6 ಸಿಕ್ಸ್ ಹೊಡೆದು, ಸಿಕ್ಸರ್ ಕಿಂಗ್ ಎನಿಸಿಕೊಂಡಿದ್ದರು. ಅಲ್ಲದೇ ಕ್ಯಾನ್ಸರ್ ನಂತಹ ಮಹಾಮಾರಿಯನ್ನು ಗೆದ್ದು ಬಂದರು ಯುವರಾಜ್. 2016 ನವೆಂಬರ್ 30 ರಂದು, ಹೆಝಲ್ ಕೀಚ್ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದರು. ಇದೀಗ ಯುವರಾಜ್ ಮತ್ತು ಹೆಝಲ್ ಕೀಚ್ ಇಬ್ಬರು ಖುಷಿ ಸುದ್ದಿಯೊಂದನ್ನು ನೀಡಿದ್ದಾರೆ. ಹೌದು ಹೆಝಲ್ ಕೀಚ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಈ ಖುಷಿ ವಿಷಯವನ್ನು ಯುವರಾಜ್ ಸಿಂಗ್ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ದೇವರು ನಮಗೆ ಗಂಡು ಮಗುವನ್ನು ನೀಡಿ ಆಶೀರ್ವದಿಸಿದ್ದಾರೆ. ನಮಗೆ ಶುಭ ಹಾರೈಸಿದ ಸ್ನೇಹಿತರಿಗೆ, ಅಭಿಮಾನಿಗಳಿಗೆ ಹಾಗೂ ನನ್ನ ಕುಟುಂಬದವರಿಗೆ ಧನ್ಯವಾದಗಳು. ನಾವು ನಮ್ಮ ಮಗುವನ್ನು ಜಗತ್ತಿಗೆ ಸ್ವಾಗತಿಸುವಾಗ ದಯವಿಟ್ಟು ಗೌಪ್ಯತೆಯನ್ನು ಬಯಸುತ್ತೇವೆ. ಆದ್ದರಿಂದ ಈ ವಿಚಾರವನ್ನು ಎಲ್ಲರೂ ಗೌರವಿಸಬೇಕು ಎಂದು ಬರೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಈ ವಿಷಯ ತಿಳಿದ ಯುವಿ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ.

%d bloggers like this: