ತೆಲುಗು ಅಲ್ಲೂ ಈಗ ಡಾಲಿ ಧನಂಜಯ ಅವರಿಗೆ ಭಾರಿ ಬೇಡಿಕೆ

2021 ಡಾಲಿ ಧನಂಜಯ್ ಅವರ ಪಾಲಿಗೆ ಅದೃಷ್ಟದ ವರ್ಷ ಎಂದರೆ ತಪ್ಪಾಗಲಾರದು. ಏಕೆಂದರೆ 2021 ರಲ್ಲಿ ಡಾಲಿ ಧನಂಜಯ್ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತಾಗಿದೆ. ಧನಂಜಯ್ ಅವರು 2021 ರಲ್ಲಿ ಅಭಿನಯಿಸಿದ ಎಲ್ಲಾ ಚಿತ್ರಗಳು ಹಿಟ್ ಆಗಿವೆ. 2021 ರ ಆರಂಭದಲ್ಲಿ ರಿಲೀಸ್ ಆದ ಆಕ್ಷನ್ ಪ್ರಿನ್ಸ್ ಅಭಿನಯದ ಪೊಗರು ಚಿತ್ರದಲ್ಲಿ ಡಾಲಿ ಅಭಿನಯಿಸಿದ್ದರು. ಈ ಚಿತ್ರ ಬಾಕ್ಸಾಫೀಸ್ ನಲ್ಲಿ ಸದ್ದು ಮಾಡಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರವು ಕೂಡ ಸಕ್ಸಸ್ ಕಂಡಿದೆ. ಈ ಚಿತ್ರದಲ್ಲಿ ಅಪ್ಪು ಅವರಿಗೆ ಖಡಕ್ ವಿಲ್ಲನ್ ಆಗಿ ಧನಂಜಯ್ ಅಭಿನಯಿಸಿದ್ದರು. ಇದಷ್ಟೇ ಅಲ್ಲದೆ ಸಲಗ, ರತ್ನನ್ ಪ್ರಪಂಚ ಸಿನಿಮಾಗಳು ಕೂಡ ಹಿಟ್ ಆಗಿವೆ. ಹೀಗಾಗಿ 2021 ಡಾಲಿ ಧನಂಜಯ್ ಪಾಲಿಗೆ ಲಕ್ಕಿ ಇಯರ್ ಎಂದೇ ಹೇಳಬಹುದು.

ನಟನಾಗಬೇಕೆಂಬ ಆಸೆಯಿಂದ ಚಂದನವನಕ್ಕೆ ಕಾಲಿಟ್ಟು, ಯಶಸ್ಸಿಗಾಗಿ ಅನೇಕ ಏಳು-ಬೀಳು, ಅವಮಾನ ಅನುಭವಿಸಿಕೊಂಡು ಇಂದು ತಮ್ಮ ಪ್ರತಿಭೆಯ ಮೂಲಕ ನಟ ರಾಕ್ಷಸನಾಗಿ ಸ್ಯಾಂಡಲ್ವುಡ್ ಬೇಡಿಕೆಯ ನಟನಾಗಿ ಮಿಂಚುತ್ತಿರುವ ನಟ ಧನಂಜಯ್. ಆರಂಭದಲ್ಲಿ ನಟಿಸಿದ ಬಹುತೇಕ ಚಿತ್ರಗಳು ಯಶಸ್ಸು ಕಾಲದೇ ಸೋಲುಂಡರೂ ಎದೆಗುಂದದೆ ಆತ್ಮವಿಶ್ವಾಸದಿಂದ ಮುನ್ನುಗ್ಗಿ ಇಂದು ತಮ್ಮ ಸಿನಿಪಯಣದಲ್ಲಿ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ವರ್ಷದ ಕೊನೆಯಲ್ಲಿ ರಿಲೀಸ್ ಆದ ಬಡವ ರಾಸ್ಕಲ್ ಚಿತ್ರವನ್ನು ಕನ್ನಡಿಗರು ತಮ್ಮ ಹೃದಯ ಸಿಂಹಾಸನದಲ್ಲಿ ಹೊತ್ತು ಮೆರವಣಿಗೆ ಮಾಡಿ ಗೆಲ್ಲಿಸಿದರು. ಬಡವ ರಾಸ್ಕಲ್ ಚಿತ್ರವು ಡಾಲಿ ಧನಂಜಯ್ ನಿರ್ಮಾಣಮಾಡಿ, ನಾಯಕನಾಗಿ ಅಭಿನಯಿಸಿದ ಚಿತ್ರವಾಗಿದೆ.

ಸ್ಯಾಂಡಲ್ವುಡ್ ನ ಬಾಕ್ಸಾಫೀಸಿನಲ್ಲಿ ಸೌಂಡ್ ಮಾಡಿದ್ದ ಬಡವ ರಾಸ್ಕಲ್ ಚಿತ್ರ, ಇದೀಗ ಟಾಲಿವುಡ್ ಮತ್ತು ಕಾಲಿವುಡ್ ಗಳಲ್ಲಿ ಸೌಂಡ್ ಮಾಡಲು ರೆಡಿಯಾಗುತ್ತಿದೆ. ಹೌದು ಕನ್ನಡದಲ್ಲಿ ಹಿಟ್ ಆಗಿರುವ ಬಡವ ರಾಸ್ಕಲ್ ಚಿತ್ರಕ್ಕೆ ತೆಲುಗು ಸಿನಿಮಾ ಇಂಡಸ್ಟ್ರಿಯಿಂದ ಡಬ್ಬಿಂಗ್ ಗೆ ಡಿಮ್ಯಾಂಡ್ ಬಂದಿದೆ. ತೆಲುಗಿನ ಪುಷ್ಪ ಸಿನಿಮಾದಲ್ಲಿ ಅಭಿನಯಿಸಿದ ಡಾಲಿ ಧನಂಜಯ್ ಅವರಿಗೆ ತೆಲುಗು ಅಭಿಮಾನಿಗಳು ಕೂಡ ಇದ್ದಾರೆ. ತೆಲುಗಿನ ಇವರ ಅಭಿಮಾನಿ ಬಳಗವು ಬಡವ ರಾಸ್ಕಲ್ ಚಿತ್ರವನ್ನು ತೆಲುಗಿಗೆ ಡಬ್ಬಿಂಗ್ ಮಾಡಲು ಕೋರಿದ್ದಾರೆ. ಇವರ ಕೋರಿಕೆಯನ್ನಾಲಿಸಿದ ಚಿತ್ರತಂಡ, ತೆಲುಗಿಗೆ ಡಬ್ಬಿಂಗ್ ಕೆಲಸ ಶುರುಮಾಡಿಕೊಂಡಿದೆ.

ಈಗಾಗಲೇ ಡಬ್ಬಿಂಗ್ ಕೆಲಸ ಭರದಿಂದ ಸಾಗಿದ್ದು, ಫೆಬ್ರುವರಿಯಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ. ಬಡವ ರಾಸ್ಕಲ್ ಚಿತ್ರವು ಒಂದು ಮಧ್ಯಮ ವರ್ಗದ ಕುಟುಂಬದ ಕಥೆಯಾಗಿದ್ದು ಇದು ಬಹುಬೇಗನೆ ಎಲ್ಲರಿಗೂ ಇಷ್ಟವಾಗಿದೆ. ತೆಲುಗಿನ ಜೊತೆಗೆ ತಮಿಳು ಒಟಿಟಿಗೂ ಕೂಡ ಈ ಚಿತ್ರ ಸೇಲ್ ಆಗಿದ್ದು, ಅತೀ ಶೀಘ್ರದಲ್ಲಿ ತಮಿಳಿನಲ್ಲಿ ಡಾಲಿ ಮಿಂಚಲಿದ್ದಾರೆ. ಚಿತ್ರರಂಗದಲ್ಲಿ ಖಾಯಂ ಆಗಿ ನೆಲೆಯೂರಲು ಸುಮಾರು 10 ವರ್ಷಗಳ ಕಾಲ ಕಷ್ಟಪಟ್ಟ ಧನಂಜಯ್ ಅವರಿಗೆ, ಕಷ್ಟಕ್ಕೆ ತಕ್ಕಂತೆ ಪ್ರತಿಫಲ ಸಿಗುವ ಸಮಯ ಇದಾಗಿದ್ದು ಸ್ಯಾಂಡಲ್ವುಡ್ ಹೆಮ್ಮೆ ಪಡುವಂತೆ ಮಾಡಿದ್ದಾರೆ.

%d bloggers like this: