ಸ್ಯಾಂಡಲ್ವುಡ್ ನ ಯಶಸ್ವಿ ಯುವ ನಿರ್ದೇಶಕರಲ್ಲಿ ರಿಷಬ್ ಶೆಟ್ಟಿ ಕೂಡ ಒಬ್ಬರು ಎಂದರೆ ತಪ್ಪಾಗಲಾರದು. ರಿಷಬ್ ಶೆಟ್ಟಿ ಯಾವಾಗಲೂ ವಿಭಿನ್ನ ಚಿತ್ರಕತೆಗಳ ಮೂಲಕ ನಮ್ಮನ್ನು ರಂಜಿಸುತ್ತಾರೆ. ಇವರ ಚಿತ್ರಗಳೆಂದರೆ ಸೀನಿಪ್ರೇಮಿಗಳಿಗೆ ಅಚ್ಚು ಮೆಚ್ಚು. 2016 ರಲ್ಲಿ ಬಾಕ್ಸಾಫೀಸ್ ಧೂಳೆಬ್ಬಿಸಿದ ಸಿನಿಮಾ, ಕಿರಿಕ್ ಪಾರ್ಟಿ ಕೇವಲ ನಟರಾದ ರಕ್ಷಿತ್ ಶೆಟ್ಟಿ ಅವರಿಗೆ ಅಷ್ಟೇ ಅಲ್ಲದೆ ರಿಷಬ್ ಶೆಟ್ಟಿ ಅವರು ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರುವಂತೆ ಮಾಡಿತ್ತು. ಇವರು ಕೇವಲ ನಿರ್ದೇಶಕನಾಗಿ ಅಷ್ಟೇ ಅಲ್ಲದೆ ನಟನಾಗಿಯೂ ಕೂಡ ತೆರೆಯ ಮೇಲೆ ಮಿಂಚಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ನಂತರ ಉಳಿದವರು ಕಂಡಂತೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಅವನೇ ಶ್ರೀಮನ್ನಾರಾಯಣ, ಹೀರೋ, ಬೆಲ್ ಬಾಟಮ್, ಗರುಡ ಗಮನ ವೃಷಭ ವಾಹನ ಹೀಗೆ ಹಲವಾರು ಚಿತ್ರಗಳನ್ನು ನಿರ್ದೇಶಿಸಿ, ಅಭಿನಯಿಸಿದ್ದಾರೆ.

ಇತ್ತೀಚಿಗೆ ಬಿಡುಗಡೆಯಾದ ರಾಜ್ ಬಿ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಒಟ್ಟಿಗೆ ಅಭಿನಯಿಸಿದ ಗರುಡ ಗಮನ ವೃಷಭ ವಾಹನ ಚಿತ್ರವು ಅಭಿಮಾನಿಗಳ ನಿರೀಕ್ಷೆಯನ್ನೂ ಮೀರಿ ಮನರಂಜಿಸುವಲ್ಲಿ ಯಶಸ್ವಿಯಾಗಿದೆ. ಎಲ್ಲರಿಗೂ ಗೊತ್ತಿರದೇ ಇರುವ ವಿಷಯವೆಂದರೆ ರಿಷಬ್ ಶೆಟ್ಟಿ ಅವರ ಮೂಲ ಹೆಸರು ಪ್ರಶಾಂತ್ ಶೆಟ್ಟಿ. ಹೌದು ಕುಂದಾಪುರದಲ್ಲಿ ಹುಟ್ಟಿದ ಈ ಪ್ರತಿಭೆಗೆ ಇದುವರೆಗೆ ಉತ್ತಮ ನಿರ್ದೇಶಕರ ಸಾಲಿನಲ್ಲಿ ಫಿಲಂ ಫೇರ್ ಅವಾರ್ಡ್, ನ್ಯಾಷನಲ್ ಫಿಲ್ಮ್ ಅವಾರ್ಡ್ ಗಳು ದೊರೆತಿವೆ. 2017 ರಲ್ಲಿ ತಮ್ಮ ಗೆಳತಿ ಪ್ರಗತಿ ಶೆಟ್ಟಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಇವರಿಗೆ 2019 ಏಪ್ರಿಲ್ 7 ರಂದು ಗಂಡು ಮಗುವಿನ ಆಗಮನವಾಗಿತ್ತು. ಪುತ್ರನಿಗೆ ತಮ್ಮ ಹೆಸರು ಹೊಂದಾಣಿಕೆಯಾಗುವಂತೆ ರನ್ವಿತ್ ಶೆಟ್ಟಿ ಎಂದು ನಾಮಕರಣವನ್ನೂ ರಿಷಬ್ ಮಾಡಿದ್ದರು.



ಇತ್ತೀಚಿಗೆ ಮತ್ತೆ ರಿಷಬ್ ಶೆಟ್ಟಿ ದಂಪತಿಗಳು ಅಭಿಮಾನಿಗಳೊಂದಿಗೆ ಸಿಹಿಸುದ್ದಿ ಒಂದನ್ನು ಹಂಚಿಕೊಂಡಿದ್ದರು. ರಿಷಬ್ ಶೆಟ್ಟಿ ಎರಡನೇ ಮಗುವಿಗೆ ತಂದೆಯಾದ ಸಂಭ್ರಮದಲ್ಲಿದ್ದಾರೆ. ರಿಷಬ್ ಶೆಟ್ಟಿ ಅವರ ಕುಟುಂಬದಲ್ಲಿ ಸಂಭ್ರಮ ದುಪ್ಪಟ್ಟಾಗಿದೆ. ಈ ಬಗ್ಗೆ ಟ್ವೀಟ್ ಮಾಡಿ ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡಿದ್ದರು. ಇತ್ತೀಚಿಗೆ ಮತ್ತೊಂದು ವಿಷಯಕ್ಕೆ ರಿಷಬ್ ಶೆಟ್ಟಿ ಸುದ್ದಿಯಲ್ಲಿದ್ದಾರೆ. ನಟನೆ, ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮಿಂಚುತ್ತಿರುವ ರಿಷಬ್ ಶೆಟ್ಟಿ ಅವರಿಗೆ ಪರಭಾಷೆಯಲ್ಲೂ ಬೇಡಿಕೆ ಹೆಚ್ಚಾಗುತ್ತಿದೆ. ಹೌದು ಇತ್ತೀಚೆಗೆ ರಿಲೀಸ್ ಆದ ತೆಲುಗು ಚಿತ್ರದ ಟ್ರೈಲರ್ ಒಂದರಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.



ತೆಲುಗಿನ ಮಿಷನ್ ಇಂಪಾಸಿಬಲ್ ಚಿತ್ರದಲ್ಲಿ ನಟ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಟಿ ತಾಪ್ಸಿ ಪನ್ನು ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಟ್ರೈಲರ್ ನೋಡಿದ ಎಲ್ಲರೂ ಸಖತ್ ಫನ್ನಿ ಆಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮಿಷನ್ ಇಂಪಾಸಿಬಲ್ ಚಿತ್ರದಲ್ಲಿ ಮೂವರು ಮಕ್ಕಳು ಹೈಲೈಟ್ ಆಗಿದ್ದಾರೆ. ಸಿನಿಮಾದಲ್ಲಿ ಈ ಮೂವರು ಮಕ್ಕಳ ಹೆಸರು ರಘುಪತಿ, ರಾಘವ, ರಾಜಾರಾಮ್. ಸಿನಿಮಾ ಎಂದರೆ ಈ ಮಕ್ಕಳಿಗೆ ಅತಿ ಹುಚ್ಚು. ದೇಶದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಇಬ್ರಾಹಿಂ ದಾವೂದ್ ನನ್ನು ಅರೆಸ್ಟ್ ಮಾಡಲು ಸಹಾಯ ಮಾಡಿದರೆ ಮೂರು ಲಕ್ಷ ರೂಪಾಯಿ ಬಹುಮಾನ ಸಿಗುತ್ತದೆ ಎನ್ನುವ ಜಾಹೀರಾತನ್ನು ನೋಡಿ, ಈ ಮೂವರು ಮಕ್ಕಳು ಇಬ್ರಾಹಿಂ ಅವರನ್ನು ಹುಡುಕಿಕೊಂಡು ಹೊರಡುತ್ತಾರೆ.



ಇಬ್ರಾಹಿಂ ದಾವೂದನ ಹುಡುಕಾಟದಲ್ಲಿ ಮಕ್ಕಳು ಯಾವ ರೀತಿ ತೊಂದರೆಗಳಿಗೆ ಸಿಲುಕುತ್ತಾರೆ ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ವಿಶೇಷವೆಂದರೆ ಟ್ರೈಲರ್ ಕೊನೆಯಲ್ಲಿ ರಿಷಬ್ ಶೆಟ್ಟಿ ಕಲೀಲ್ ಎಂಬ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೂ ಕೆಜಿಎಫ್ ಚಿತ್ರದ ಉಲ್ಲೇಖ ಕೂಡ ಇದರಲ್ಲಿ ಮಾಡಲಾಗಿದೆ. ಈ ಸಿನಿಮಾದ ಕೆಲವು ದೃಶ್ಯಗಳನ್ನು ಬೆಂಗಳೂರಿನಲ್ಲಿ ಶೂಟ್ ಮಾಡಿದ್ದಾರೆ. ನಮ್ಮ ಕರ್ನಾಟಕದ ಯುವಪ್ರತಿಭೆ ರಿಷಬ್ ಶೆಟ್ಟಿ ತೆಲುಗು ಸಿನಿರಂಗದಲ್ಲಿ ಯಶಸ್ಸು ಕಾಣಲಿ ಎಂಬುದು ನಮ್ಮೆಲ್ಲರ ಆಶಯ. ಸದ್ಯಕ್ಕೆ ರಿಷಬ್ ಶೆಟ್ಟಿ ಅವರು ಕಾಂತಾರ, ರುದ್ರಪ್ರಯಾಗ ಹಾಗೂ ಶಿವರಾಜ್ ಕುಮಾರ್ ನಟನೆಯ 126 ನೇ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.