ತೆಲುಗು ಕಿರುತೆರೆಯತ್ತ ಹೆಜ್ಜೆ ಹಾಕಿದ ಕನ್ನಡದ ಮತ್ತೊಬ್ಬ ಕಿರುತೆರೆ ನಟ

ಸಿನಿ ಅಭಿಮಾನಿಗಳಂತೆಯೇ ನಮ್ಮ ಸ್ಮಾಲ್ ಸ್ಕ್ರೀನ್ ಗಳಲ್ಲಿ ದಿನನಿತ್ಯ ಪ್ರಸಾರವಾಗುವ ಧಾರಾವಾಹಿಗಳಿಗೂ ಕೂಡ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಸಿನಿಮಾ ನಟ ನಟಿಯರಿಗೆ ದೊಡ್ಡ ದೊಡ್ಡ ಅಭಿಮಾನಿ ಬಳಗವು ಇರುವ ಹಾಗೆ ಕಿರುತೆರೆಯಲ್ಲಿ ಪ್ರಸಾರವಾಗುವ ಧಾರಾವಾಹಿಯ ನಟನಟಿಯರಿಗೂ ಕೂಡ ಅಭಿಮಾನಿಗಳ ಬಳಗವಿದೆ. ಇತ್ತೀಚಿಗೆ ಪ್ರಸಾರವಾಗುವ ಧಾರವಾಹಿಗಳು ಕೂಡ ಯಾವುದೇ ಸಿನಿಮಾಗೆ ಕಡಿಮೆಯಿಲ್ಲವೆಂಬಂತೆ ನಿರ್ದೇಶನ ಮಾಡುತ್ತಿವೆ. ಧಾರಾವಾಹಿಗಳು ಒಂದು ಕುಟುಂಬದಲ್ಲಿ ದಿನನಿತ್ಯ ನಡೆಯಬಹುದಾದ ನೈಜ ಘಟನೆಗಳನ್ನು ಆಧರಿಸಿರುವುದರಿಂದ ಇವುಗಳು ಎಲ್ಲರಿಗೂ ಅಚ್ಚುಮೆಚ್ಚು. ದೊಡ್ಡ ದೊಡ್ಡ ಸಿನಿಮಾ ನಟರಂತೆ ಧಾರಾವಾಹಿಯಲ್ಲಿ ಲೀಡ್ ರೋಲ್ ನಲ್ಲಿರುವ ಪಾತ್ರಧಾರಿಗಳಿಗೂ ಕೂಡ ಕ್ರೇಜ್ ಹೆಚ್ಚುತ್ತಿದೆ.

ಯಾವುದೇ ಒಂದು ಧಾರಾವಾಹಿ ಹಿಟ್ ಆದ ತಕ್ಷಣ ಆ ಧಾರವಾಹಿಯು ಬೇರೆ ಭಾಷೆಗಳಲ್ಲೂ ಪ್ರಸಾರವಾಗುತ್ತದೆ ಹೀಗಾಗಿ ಧಾರಾವಾಹಿಯ ನಟ ನಟಿಯರು ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲೂ ಕೂಡ ಅಭಿಮಾನಿಗಳನ್ನು ಹೊಂದಿರುತ್ತಾರೆ. ಕನ್ನಡದ ಕಿರುತೆರೆ ನಟ ನಟಿಯರು ಪರಭಾಷೆಯಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಕಂಡುಕೊಳ್ಳುತ್ತಿದ್ದು, ಬೇರೆ ಭಾಷೆಗಳಲ್ಲೂ ಕೂಡ ಮಿಂಚುತ್ತಿದ್ದಾರೆ. ಈಗಾಗಲೇ ಅದೆಷ್ಟೋ ತೆಲುಗು ಧಾರಾವಾಹಿಗಳಲ್ಲಿ ನಮ್ಮ ಕನ್ನಡದ ನಟ ನಟಿಯರೇ ಮಿಂಚುತ್ತಿದ್ದಾರೆ. ಈಗ ಮತ್ತೋರ್ವ ಕನ್ನಡದ ಹುಡುಗ ತೆಲುಗು ಪ್ರೇಕ್ಷಕರನ್ನು ರಂಜಿಸಲು ಸಿದ್ದರಾಗಿದ್ದಾರೆ. ಹೌದು ಮೈಸೂರಿನ ಹುಡುಗ ಪ್ರಜ್ಜು ಪೂರ್ವಿಕ್ ಕನ್ನಡ ಕಿರುತೆರೆಯಲ್ಲಿ ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿ ಈಗ ತೆಲುಗು ನಾಡಿಗೆ ಕಾಲಿಟ್ಟಿದ್ದಾರೆ.

ಕನ್ನಡ ಕಿರುತೆರೆಯ ಅದೆಷ್ಟೋ ಪ್ರತಿಭೆಗಳು ತೆಲುಗು ನಾಡಿನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಪರಭಾಷೆಯಲ್ಲಿ ಕನ್ನಡಿಗರನ್ನು ಹೃದಯಪೂರ್ವಕವಾಗಿ ವೆಲ್ಕಮ್ ಮಾಡುತ್ತಾರೆ. ಹೀಗಾಗಿಯೇ ನಮ್ಮ ನಾಡಿನ ನಟ ನಟಿಯರು ತೆಲುಗುವಿನಲ್ಲಿ ಮಿಂಚುತ್ತಿದ್ದಾರೆ. ಈಗ ಆ ಸಾಲಿಗೆ ಪ್ರಜ್ಜು ಪೂರ್ವಿಕ್ ಸೇರ್ಪಡೆಯಾಗಿದ್ದಾರೆ. ಕನ್ನಡದಿಂದ ತೆಲುಗು ಕಿರುತೆರೆಗೆ ಕಾಲಿಟ್ಟು ಭವಿಷ್ಯ ರೂಪಿಸಿಕೊಂಡ ಕನ್ನಡದ ಕಲಾವಿದರ ಪಟ್ಟಿಗೆ ಈಗ ಉದಯೋನ್ಮುಖ ನಟ ಪ್ರಜ್ಜು ಸೇರ್ಪಡೆಯಾಗುತ್ತಿದ್ದಾರೆ. ಅಂದಹಾಗೆ ಪ್ರಜ್ಜು ಅವರು ಅಭಿನಯಿಸುತ್ತಿರುವುದು ಕುಂಕುಮಪುವ್ವು ಧಾರಾವಾಹಿಯಲ್ಲಿ. 2016ರಿಂದ ಮಧ್ಯಾಹ್ನದ ಸ್ಲಾಟ್ನಲ್ಲಿ ಉತ್ತಮ ರೇಟಿಂಗ್ ನೊಂದಿಗೆ ಕುಂಕುಮಪುವ್ವು ಧಾರಾವಾಹಿ ಪ್ರಸಾರವಾಗುತ್ತಿದೆ. ಅಮೃತ ಎನ್ನುವ ಮುಗ್ಧ ಹುಡುಗಿಯ ಜೀವನದ ಸುತ್ತ ಕತೆ ಹೆಣೆಯಲಾಗಿತ್ತು.

ಸದ್ಯಕ್ಕೆ ಅಮೃತಾಳ ಮಕ್ಕಳ ಕುರಿತು ಹೊಸ ಅಧ್ಯಾಯ ಪ್ರಸಾರವಾಗಲಿದೆ. ಅಮೃತ ಅವರಿಗೆ ಮೂರು ಮಕ್ಕಳು ಇರುತ್ತಾರೆ. ಮೊದಲನೆಯವಳು ಅಂಜಲಿ ಇವಳೇ ಕಥಾ ನಾಯಕಿ. ಎರಡನೆಯವರು ರಾಹುಲ್, ಮೂರನೆಯವರು ವೈಷ್ಣವಿ. ಈ ರಾಹುಲ್ ಪಾತ್ರವನ್ನು ಪ್ರಜ್ಜು ಪೂರ್ವಿಕ್ ನಿರ್ವಹಿಸುತ್ತಿದ್ದಾರೆ. ತೆಲುಗುವಿನ ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕುಂಕುಮಪುವ್ವು ಧಾರಾವಾಹಿಯಲ್ಲಿ ರಾಹುಲ್ ಪಾತ್ರದ ಮೂಲಕ ತೆಲುಗು ಪ್ರೇಕ್ಷಕರ ಮನೆಗೆ ಕಾಲಿಡುತ್ತಿದ್ದಾರೆ ನಮ್ಮ ಕನ್ನಡದ ಕುವರ. ಮಧ್ಯಾಹ್ನದ ಸ್ಲಾಟ್ ನಲ್ಲಿ ಸ್ಟಾರ್ ಮಾ ವಾಹಿನಿಯಲ್ಲಿ ಕುಂಕುಮಪುವ್ವು ಪ್ರಸಾರವಾಗಲಿದೆ. ನಮ್ಮ ಕನ್ನಡದ ಯುವ ಪ್ರತಿಭೆಗಳು ಬೇರೆ ಇಂಡಸ್ಟ್ರಿಯಲ್ಲಿ ಅಭಿನಯಿಸುವುದಕ್ಕೆ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ.

%d bloggers like this: