ತೆಲುಗು ಸುಪ್ರಸಿದ್ಧ ನಟನ‌ ಹೊಸ ಚಿತ್ರಕ್ಕೆ ಕನ್ನಡದ ಯುವ ಸಂಗೀತ ನಿರ್ದೇಶಕ 

ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಹೊಸದೊಂದು ಪರ್ವ ಆರಂಭವಾಗುತ್ತಿದೆ. ಕನ್ನಡಡ ಅನೇಕ ನಟ ನಟಿಯರು ಪರಭಾಷೆಗಳಲ್ಲಿ ಅವಕಾಶ ಪಡೆದು ನಟಿಸಿ ಸೈ ಎನಿಸಿಕೊಂಡಿದ್ದಾರೆ. ತೆಲುಗು, ತಮಿಳು ಭಾಷೆಯಲ್ಲಿ ನಟಿಸಿ ಅಲ್ಲಿಯೂ ಕೂಡ ಕನ್ನಡದ ನಟ ನಟಿಯರು ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಹೌದು 2016ರಲ್ಲಿ ತೆರೆಕಂಡ ಡಿ.ಸತ್ಯ ಪ್ರಕಾಶ್ ನಿರ್ದೇಶನದ ರಾಮಾ ರಾಮಾ ರೇ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುವ ಮೂಲಕ ಸ್ಯಾಂಡಲ್ ವುಡ್ ಗೆ ಮ್ಯೂಸಿಕ್ ಡೈರೆಕ್ಟರ್ ಆಗಿ ಎಂಟ್ರಿ ಕೊಟ್ಟಂತಹ ವಾಸುಕಿ ವೈಭವ್ ಇಂದು ಕನ್ನಡ ಚಿತ್ರರಂಗದ ಜನಪ್ರಿಯ ಗಾಯಕ ಮತ್ತು ಸಂಗೀತ ನಿರ್ದೇಶಕರಾಗಿ ಮಿಂಚುತ್ತಿದ್ದಾರೆ.

ಮೂಲತಃ ರಂಗಭೂಮಿ ಹಿನ್ನೆಲೆಯುಳ್ಳ ವಾಸುಕಿ ವೈಭವ್ ತಮ್ಮ ತಂದೆಯಂತೆ ಅನೇಕ ನಾಟಕಗಳಲ್ಲಿ ಕೆಲಸ ಮಾಡಿದ್ದಾರೆ. ರಾಮಾ ರಾಮಾ ರೇ ಚಿತ್ರದ ಯಶಸ್ಸಿನ ನಂತರ ವಾಸುಕಿ ವೈಭವ್ ಅವರ ಪ್ರತಿಭೆಗೆ ತಕ್ಕಂತೆ ಅವಕಾಶಗಳು ದೊರೆತು ವಿಭಿನ್ನ ಪ್ರಯೋಗಾತ್ಮಕ ಚಿತ್ರಗಳಿಗೆ ಗಾಯನ ಮತ್ತು ಸಂಗೀತ ನಿರ್ದೇಶನ ಮಾಡಿದ್ದಾರೆ. ಮುಂದಿನ ನಿಲ್ದಾಣ, ಫ್ರೆಂಚ್ ಬಿರಿಯಾನಿ, ಒಂದಲ್ಲ ಎರಡಲ್ಲ, ಗರುಡ ಗಮನ ವೃಷಭ ವಾಹನ, ಇತ್ತೀಚೆಗೆ ಬಿಡುಗಡೆಯಾಗಿ ಸಕ್ಸಸ್ ಕಂಡಿರುವ ಬಡವ ರಾಸ್ಕಲ್ ಹೀಗೆ ಅನೇಕ ಸೂಪರ್ ಹಿಟ್ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ವಾಸುಕಿ ವೈಭವ್ ಅವರು ಮ್ಯೂಸಿಕ್ ಜೊತೆಗೆ ಸಾಹಿತ್ಯ ಗಾಯನದಲ್ಲಿಯೂ ಕೂಡ ಪ್ರತಿಭಾವಂತರಾಗಿದ್ದಾರೆ.

ಇದೀಗ ಈ ರಂಗಭೂಮಿ ಪ್ರತಿಭೆ ಟಾಲಿವುಡ್ ಸ್ಟಾರ್ ನಟ ರಾಣಾ ದಗ್ಗುಬಾಟಿ ನಿರ್ಮಾಣದ 35 ಎಂಬ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ವಾಸುಕಿ ವೈಭವ್ ಟಾಲಿವುಡ್ ಅಂಗಳಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಇನ್ನು ಈ 35 ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ನಿವೇತಾ ಥಾಮಸ್ ನಟಿಸುತ್ತಿದ್ದಾರೆ. ಕಥೆಗೆ ಬದ್ದವಾಗಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಈ ಚಿತ್ರಕ್ಕೆ ನನ್ನ ಕೆಲಸ ಆರಂಭವಾಗಿದೆ. ನನ್ನ ಸಂಗೀತ ವೃತ್ತಿ ಜೀವನಕ್ಕೆ ಈ ಅವಕಾಶ ಹೊಸ ಚೈತನ್ಯವೊಂದನ್ನ ನೀಡಿದೆ ಎಂದು ವಾಸುಕಿ ವೈಭವ್ ತಿಳಿಸಿದ್ದಾರೆ.

%d bloggers like this: