ಪ್ರತಿಯೊಬ್ಬರ ಜೀವನದಲ್ಲಿಯು ಕಷ್ಟ, ನೋವು, ಸೋಲು, ಅವಮಾನ ಎದುರಾಗುತ್ತದೆ. ಆದರೆ ಕೆಲವರು ಈ ಅವಮಾನಕ್ಕೆ ಅಂಜಿ ಕುಗ್ಗುತ್ತಾರೆ. ಆದರೆ ಇನ್ನು ಕೆಲವೇ ಕೆಲವರು ಮಾತ್ರ ಆದ ಅವಮಾನವನ್ನೇ ಸವಾಲಾಗಿ ಸ್ವೀಕರಿಸಿ, ಅವಮಾನಿಸಿದವರಿಂದಲೇ ಸನ್ಮಾನ ಮಾಡಿಸಿಕೊಳ್ಳುವಂತಹ ಮಟ್ಟಕ್ಕೆ ಬೆಳೆಯುತ್ತಾರೆ. ಇದಕ್ಕೆ ಉತ್ತಮ ಉದಾಹರಣೆಯಾಗಿ ಆಟೋಮೊಬೈಲ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ, ಪ್ರತಿಷ್ಟಿತ ಸಂಸ್ಥೆಗಳ ಪೈಕಿ ಮೊದಲ ಸಾಲಿನಲ್ಲಿ ನಿಲ್ಲಬಲ್ಲ ಲ್ಯಾಂಬ್ರೋಗಿನಿ ಕಾರು ಕೂಡ ಒಂದಾಗಿದೆ. ಈ ಐಷರಾಮಿ ಲ್ಯಾಂಬೋರ್ಗಿನಿ ಕಾರು ಯಾವ ಮಟ್ಟಿಗೆ ಸದ್ದು ಮಾಡುತ್ತಿದೆ, ಅಂದರೆ ಈ ಕಾರು ನೂತನವಾಗಿ ಬಿಡುಗಡೆಯಾಗುತ್ತಿದೆ ಅಂದಾಕ್ಷಣ ಇದು ಕ್ಷಣ ಮಾತ್ರದಲ್ಲಿ ವಿಶ್ವದಾದ್ಯಂತ ಸುದ್ದಿಯಾಗುತ್ತದೆ.

ಅಂತಹ ವೈಶಿಷ್ಟ್ಯ ವಿನ್ಯಾಸಗಳನ್ನು ಈ ಲ್ಯಾಂಬೋರ್ಗಿನಿ ಕಾರು ಹೊಂದಿದೆ, ಈ ಕಾರಿನ ಮೌಲ್ಯ ಕೇಳಿದೊಡನೆ, ಜಗತ್ತಿನ ಪ್ರತಿಷ್ಟಿತ ಸಂಸ್ಥೆಯ ಒಡೆಯರಾಗಿರುವ ಶ್ರೀಮಂತರು ಕೂಡ ಒಮ್ಮೆ ಈ ಕಾರು ಖರೀದಿ ಮಾಡಲು ಮೀನ ಮೇಷ ಎಣಿಸುತ್ತಾರೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಈ ಸಂಸ್ಥೆ ಹುಟ್ಟಿದ್ದು, ಬೆಳೆದಿದ್ದು ಮಾತ್ರ ನಿಜಕ್ಕೂ ರೋಚಕ ಕಥೆಯಾಗಿದೆ. ಲ್ಯಾಂಬೋರ್ಗಿನಿ ಸಂಸ್ಥೆಯ ಮಾಲೀಕನಿಗೆ, ಫೆರಾರಿ ಕಾರ್ ಒಡೆಯ ಮಾಡಿದ ಅವಮಾನ ಲ್ಯಾಂಬೋರ್ಗಿನಿ ಕಾರು ಹುಟ್ಟಲು ಕಾರಣವಾಯಿತು ಎಂಬುದು ಎಂತಹವರನ್ನು ಕೂಡ ಆಶ್ಚರ್ಯಚಕಿತಗೊಳಿಸುತ್ತದೆ. ಹೌದು ಈ ಲ್ಯಾಂಬೋರ್ಗಿನಿ ಕಾರು ಮೊದಲ ಬಾರಿಗೆ 1963ರಲ್ಲಿ ಫೆರೋಶಿಯಾ ಲ್ಯಾಂಬೋರ್ಗಿನಿ ಎಂಬುವವರಿಂದ ಆರಂಭವಾಯಿತು.



ಈ ಫೆರೋಶಿಯಾ ಲ್ಯಾಂಬೋರ್ಗಿನಿ ನಮ್ಮಂತೆ, ನಿಮ್ಮಂತೆ ಕೇವಲ ಸಾಮಾನ್ಯ ವ್ಯಕ್ತಿ, ಇವರ ಜೀವನದ ಕತೆ ನಿಜಕ್ಕೂ ಇತರರಿಗೆ ಸ್ಪೂರ್ತಿಯಾಗುತ್ತದೆ. ಇಟಲಿ ದೇಶದ ಕೆನಾ಼ಜೋ ಎಂಬ ಪುಟ್ಟ ಹಳ್ಳಿಯಲ್ಲಿ ಫೆರೋಶಿಯಾ ಜನಿಸಿದರು. ಈ ಫೆರೊಶಿಯಾ ಅವರ ತಂದೆ ಆಂಟೋನಿ ಲ್ಯಾಂಬೋರ್ಗಿನಿ, ಗದ್ದೆ ತೋಟಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ತಮ್ಮ ಕುಟುಂಬವನ್ನು ನಿರ್ವಹಿಸುತ್ತಿದ್ದರು. ಆದರೆ ಇವರ ಮಗ ಫೆರ್ಶಿಯೋನಿಗೆ ಮಾತ್ರ ಇಂಜಿನ್, ಮೆಕಾನಿಕಲ್ ಬಗ್ಗೆ ಹೆಚ್ಚಿನ ಒಲವಿತ್ತು. ಇದೇ ಕಾರಣಕ್ಕೆ ಮೆಕ್ಯಾನಿಕಲ್ ಕ್ಷೇತ್ರದಲ್ಲಿ ವಿದ್ಯಾಭ್ಯಾಸಮಾಡಿ ಇಟಲಿಯ ರಾಯಲ್ ಏರ್ ಫೋರ್ಸ್ ಸಂಸ್ದೆಯಲ್ಲಿ ಕೆಲಸ ಪಡೆಯುತ್ತಾರೆ. ಆ ಸಮಯದಲ್ಲಿ ಎರಡನೇಯ ಮಹಾಯುದ್ಧ ನಡೆಯುತ್ತಿರುತ್ತದೆ. ಆ ಯುದ್ದದಲ್ಲಿ ಮೆಕ್ಯಾನಿಕಲ್ ಅಗಿ ಕಾರ್ಯನಿರ್ವಹಿಸುತ್ತಾರೆ.



ಯುದ್ದ ಮುಗಿದ ಬಳಿಕ ತಮ್ಮ ಊರಿನಲ್ಲಿ ತಮ್ಮದೇ ಒಂದು ಪುಟ್ಟ ಗ್ಯಾರೇಜ್ ಆರಂಭಿಸುತ್ತಾರೆ, ಹೀಗೆ ಈ ಮೆಕ್ಯಾನಿಕಲ್ ಕೆಲಸ ಮಾಡಿಕೊಂಡು ಜೀವನ ಸಾಗುತ್ತದೆ. ಒಂದಷ್ಟು ವರ್ಷಗಳ ನಂತರ ದುಡಿದ ಹಣದಲ್ಲಿ ಫಿಯೇಟ್ ಟಾಪ್ ಟೆನ್ ಕಾರನ್ನು ಖರೀದಿ ಮಾಡುತ್ತಾರೆ. ಆ ಕಾರಿಗೆ ಒಂದಷ್ಟು ಮಾಡಿಫಿಕೇಷನ್ ಮಾಡಿಕೊಂಡು ಖುಷಿಯಾಗಿದ್ದ ಸಂದರ್ಭದಲ್ಲಿ ಲ್ಯಾಂಬೋರ್ಗಿನಿಯ ಐಡಿಯಾ ಹೊಳೆಯುತ್ತದೆ. ನಾನೇ ಏಕೆ ಒಂದು ಕಂಪನಿ ಆರಂಭಿಸ ಬಾರದು, ಹೇಗೋ ಸೇನೆಯಲ್ಲಿ ಕೆಲಸ ಮಾಡಿದ ಅನುಭವಯಿದೆ ಎಂದು, ಲ್ಯಾಂಬೋರ್ಗಿನಿ ಸೇನೆಯಲ್ಲಿ ಬಳಸದ ಒಂದಷ್ಟು ಎಂಜಿನ್ ಗಳನ್ನು ಬಳಸಿಕೊಂಡು ಟ್ರ್ಯಾಕ್ಟರ್ ತಯಾರು ಮಾಡಲು ಆರಂಭಿಸುತ್ತಾರೆ.



ಆಗಾಗಲೇ ಯುದ್ದಮುಗಿದ ಸಮಯ, ರೈತರಿಗೆ ಟ್ರ್ಯಾಕ್ಟರ್ ಗಳ ಅವಶ್ಯಕತೆ ಹೆಚ್ಚಾಗಿರುತ್ತದೆ. ಈ ಸಂಧರ್ಭದಲ್ಲಿ ಫೆರೋಶಿಯಾ ಲ್ಯಾಂಬೋರ್ಗಿನಿ ಟ್ರ್ಯಾಕ್ಟರ್ ಯೋಜನೆ ಸಕ್ಸಸ್ ಆಗಿ, ತನ್ನದೇ ಯಾದ ಅಂದು ಲ್ಯಾಂಬೋರ್ಗಿನಿ ಟ್ರ್ಯಾಕ್ಟರ್ ಕಂಪನಿಯನ್ನು 1948ರಲ್ಲಿ ಪ್ರಾರಂಭಿಸುತ್ತಾನೆ. ಇವರ ಕಂಪನಿಯ ಲ್ಯಾಂಬೋರ್ಗೀನಿ ಕಾರಿಗೆ ಬಾರಿ ಬೇಡಿಕೆ ಬರುತ್ತದೆ. ಕೇವಲ ಕೆಲವೇ ತಿಂಗಳಲ್ಲಿ ಇಟಲಿಯ ಪ್ರತಿಷ್ಟಿತ ಟ್ರ್ಯಾಕ್ಟರ್ ಕಂಪನಿಗಳ ಪಟ್ಟಿಯಲ್ಲಿ ಲ್ಯಾಂಬೋರ್ಗಿನಿ ಟ್ರಾಕ್ಟರ್ ಕೂಡ ಸೇರುತ್ತದೆ. ಈ ಸಮಯದಲ್ಲಿ ಫಿರೋಶಿಯಾ ಲ್ಯಾಂಬೋರ್ಗಿನಿ ಅವರು ಶ್ರೀಮಂತವ್ಯಕ್ತಿಯಾಗಿ ಬೆಳೆದು, ಐಷರಾಮಿ ಜೀವನ ನಡೆಸಲು ಆರಂಭಿಸುತ್ತಾನೆ. ತನಗೆ ಒಂದು ಐಷರಾಮಿ ಕಾರು ಬೇಕು ಎಂದನಿಸಿ ಪ್ರತಿಷ್ಟಿತ ಸಂಸ್ಥೆಯಾದ ಫೆರಾರಿ 250 ಸ್ಪೋರ್ಟ್ಸ್ ಕಾರನ್ನು ಖರೀದಿ ಮಾಡುತ್ತಾರೆ.



ಆದರೆ ಕೆಲವು ದಿನಗಳ ನಂತರ ಈ ಕಾರಿನಲ್ಲಿ ಕ್ಲಚ್ ದೋಷ ಇರುವುದು ಕಂಡುಬರುತ್ತದೆ, ಈ ವಿಚಾರವನ್ನು ನೇರವಾಗಿ ಫೆರಾರಿ ಸಂಸ್ಥೆಯ ಮಾಲೀಕ ಆಂಜಿಯೋ ಫೆರಾರಿ ಬಳಿ ಈ ಕಾರಲ್ಲಿರುವ ದೋಷ ಸಮಸ್ಯೆಯನ್ನು ಹೇಳಿಕೊಳ್ಳುತ್ತಾನೆ. ಇವನ ಮಾತಿನಿಂದ ಅಸಮಾಧಾನಗೊಂಡ ಆಂಜಿಯೋ ಫೆರಾರಿ, ನೀವೆಲ್ಲಾ ಟ್ರ್ಯಾಕ್ಟರ್ ಓಡಿಸೋಕೆ ಮಾತ್ರ ಲಾಯಕ್ಕು, ನನ್ನ ಫೆರಾರಿ ಕಾರನ್ನು ಓಡಿಸುವುದಕ್ಕೆ ಅರ್ಹರಲ್ಲ ಎಂದು ಅವಮಾನ ಮಾಡುತ್ತಾನೆ. ಈ ಅವಮಾನದ ವ್ಯಂಗ್ಯದ ಮಾತನ್ನು ಮನಸ್ಸಿಗೆ ತೆಗೆದುಕೊಂಡ ಫೆರೋಶಿಯಾ ಲ್ಯಾಂಬೋರ್ಗಿನಿ, ನಾನೇ ಏಕೆ ಒಂದು ಕಾರು ಕಂಪನಿಯನ್ನು ಆರಂಭಿಸಬಾರದು, ಹೇಗಿದ್ದರು ನನಗೂ ಕೂಡ ಈ ಕಾರಿನ ಬಗ್ಗೆ ಆಸಕ್ತಿಯಿದೆ ಇವರಿಗೆ ಬುದ್ದಿ ಕಲಿಸಬೇಕು ಅಂದರೆ ನನ್ನದೇ ಒಂದು ಕಾರು ಸಂಸ್ಥೆಯನ್ನು ಆರಂಭಿಸಬೇಕು ಎಂದು ನಿರ್ಧಾರ ಮಾಡುತ್ತಾನೆ.



ನಂತರದಲ್ಲಿ ಇಟಲಿಯ ಅಗಾಟದಲ್ಲಿ ಲ್ಯಾಂಬೋರ್ಗೀನಿ ಆಟೋಮೊಬೈಲ್ ಫ್ಯಾಕ್ಟರಿಯನ್ನು ಆರಂಭಿಸುತ್ತಾನೆ, ಫೆರಾರಿ ಸಂಸ್ದೆಯಲ್ಲಿ ಕೆಲಸ ಮಾಡಿದ ಮೂರು ಹಳೆಯ ಕೆಲಸಗಾರರನ್ನು ನೇಮಿಸಿಕೊಂಡು ಲ್ಯಾಂಬೋರ್ಗಿನಿ ಕಾರಿನ ಉತ್ಪಾದನೆಯನ್ನು ಆರಂಭಿಸುತ್ತಾರೆ. ಮೊದಲ 1964 ಲ್ಯಾಂಬೋರ್ಗೀನಿ 350 ಜಿಟಿ ಎಂಬ ಕಾರನ್ನು ಬಿಡುಗಡೆ ಮಾಡುತ್ತಾರೆ. ಆದರೆ ಈ ಕಾರು ಅಷ್ಟಾಗಿ ಯಶಸ್ಸು ಪಡೆಯುವುದಿಲ್ಲ. ಆದರೆ 1966ರಲ್ಲಿ ಬಿಡುಗಡೆಯಾದ ಲ್ಯಾಂಬೋರ್ಗೀನಿ ನ್ಯುರಾ ಸ್ಪೋರ್ಟ್ಸ್ ಕಾರು ಲ್ಯಾಂಬೋರ್ಗಿನಿ ಇಟಲಿ ದೇಶಾದ್ಯಂತ ಭಾರಿ ಜನಪ್ರಿಯ ಪಡೆಯುತ್ತದೆ.



ಆ ಕಾರಿನ ಹೈ ವೋಲ್ಟೇಟ್ ಕಾರ್ಯ ಕ್ಷಮತೆ, ವಿನೂತನ ವಿನ್ಯಾಸ, ವಿಶೇಷ ತಂತ್ರಜ್ಞಾನದೊಂದಿಗೆ ತಯಾರಾಗಿದ್ದ, ಈ ಕಾರಿಗೆ ಜಗತ್ತಿನ ಶ್ರೀಮಂತರೆಲ್ಲಾ ಮನಸೂರೆಗೊಳ್ಳುತ್ತಾರೆ. ಅಂದು ಆರಂಭವಾದ ಈ ಲ್ಯಾಂಬೋರ್ಗೀನಿ ಸುವರ್ಣಯುಗ ಇಂದಿಗೂ ಕೂಡ ರಾರಜಿಸುತ್ತಿದೆ. ಫೆರ್ಶಿಯಾ ಲ್ಯಾಂಬೋರ್ಗೀನಿ ಅವರ ಯಶಸ್ಸಿನ ಸಾಹಸಗಾಥೆ ಎಲ್ಲರಿಗೂ ಸ್ಪೂರ್ತಿಯಾಗಿದೆ. ತಮಗಾದ ಅವಮಾನಕ್ಕೆ ಅಂಜದೇ ಅವಮಾನಿಸಿದವರಿಂದಲೇ ಸನ್ಮಾನ ಪಡೆದುಕೊಳ್ಳುವುದು ನಿಜಕ್ಕೂ ಜೀವನದ ಅರ್ಥಪೂರ್ಣ ಸಾಧನೆ ಎಂದು ಹೇಳಬಹುದು.