ಯಾರಿಗೂ ತಿಳಿಯದಂತೆ ಸರತಿ ಸಾಲಿನಲ್ಲಿ ಅಪ್ಪು ಸಮಾಧಿಗೆ ಬಂದು ನಮನ ಸಲ್ಲಿಸಿದ ದಕ್ಷಿಣ ಭಾರತದ ಸ್ಟಾರ್ ನಟ

ಪುನೀತ್ ರಾಜ್ ಕುಮಾರ್ ಅವರ ದೇಹ ನಮ್ಮಿಂದ ದೂರವಾಗಿರಬಹುದು, ಆದರೆ ಅವರು ಮಾಡಿರುವ ಒಳ್ಳೆಯ ಕಾರ್ಯಗಳು ಅವರನ್ನು ಇಂದಿಗೂ ಕರ್ನಾಟಕದ ಜನರ ಮನೆ ಮನದಲ್ಲಿ ಜೀವಂತವಾಗಿರಿಸಿದೆ. ಬದುಕಿದ್ದಾಗ ಪುನೀತ್ ರಾಜ್ ಕುಮಾರ್ ಅವರು ಮಾಡಿರುವ ಒಳ್ಳೆಯ ಕೆಲಸಗಳು ಅಷ್ಟಿಷ್ಟಲ್ಲ. ಅವರು ನಡೆಸುತ್ತಿದ್ದ ವೃದ್ಧಾಶ್ರಮಗಳ ಬಗ್ಗೆ, ಅನಾಥಾಶ್ರಮಗಳ ಬಗ್ಗೆ, ಗೋಶಾಲೆಗಳ ಬಗ್ಗೆ ಇದುವರೆಗೆ ಯಾರಿಗೂ ತಿಳಿದಿರಲಿಲ್ಲ. ಬಲಗೈ ಮಾಡುವ ದಾನ ಎಡಗೈಗೆ ತಿಳಿಯಬಾರದು ಎಂಬ ತತ್ವವನ್ನು ಪುನೀತ್ ಅವರು ಅನುಸರಿಸಿದ್ದಾರೆ. ತಮ್ಮ ನಿಷ್ಕಲ್ಮಶ ನಟನೆಯಿಂದ ಎಲ್ಲರ ಹೃದಯ ಗೆದ್ದಿದ್ದ ಅಪ್ಪು ಅವರು, ಅವರ ಸಾಮಾಜಿಕ ಸೇವೆಗಳಿಂದ ಇನ್ನೂ ಹೃದಯವನ್ನು ಗೆದ್ದಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನದಿಂದ ಅವರ ಎಷ್ಟೋ ಅಭಿಮಾನಿಗಳು ಇಂದಿಗೂ ದುಃಖಿಸುತ್ತಿದ್ದಾರೆ. ಎಷ್ಟೋ ಮನೆಗಳಲ್ಲಿ ಇನ್ನೂ ಸೂತಕದ ಛಾಯೆ ಆವರಿಸಿದೆ. ಪುನೀತ್ ಅವರು ನಮ್ಮೊಂದಿಗಿಲ್ಲ ಎಂಬುದನ್ನು ಊಹಿಸಲು ಆಗುತ್ತಿಲ್ಲ. ಇಂದಿಗೂ ಪುನೀತ್ ಅವರ ಸಮಾಧಿಗೆ ಎಷ್ಟೋ ಜನ ಅವರ ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ. ಬೆಂಗಳೂರಿನ ಎಷ್ಟೋ ರಸ್ತೆಗಳಿಗೆ ಪುನೀತ್ ರಾಜಕುಮಾರ್ ಅವರ ಹೆಸರನ್ನು ಇಡಲಾಗುತ್ತಿದೆ. ಪುನೀತ್ ಅವರು ತಮ್ಮ ನೇತ್ರಗಳನ್ನು ದಾನ ಮಾಡಿದ್ದರು ಎಂಬ ಸುದ್ದಿಯನ್ನು ತಿಳಿದ ಅನೇಕರು ತಮ್ಮ ನೇತ್ರಗಳನ್ನು ದಾನ ಮಾಡಲು ಮುಂದಾಗಿದ್ದಾರೆ. ಅಪ್ಪು ಅವರಿಂದ ಪ್ರೇರಣೆಗೊಂಡ ಎಷ್ಟೋ ಜನ, ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ.

ಇತ್ತೀಚೆಗೆ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಉಚಿತ ಗ್ರಂಥಾಲಯವೊಂದನ್ನು ತೆರೆದು, ಸ್ಪರ್ಧಾರ್ಥಿಗಳಿಗೆ ಸಹಾಯವಾಗಲೆಂದು ಉಚಿತ ವೈಫೈ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಅಂತೆಯೇ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥವಾಗಿ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣ ಒಂದಕ್ಕೆ ಪುನೀತ್ ರಾಜಕುಮಾರ್ ಅವರ ಹೆಸರು ನಾಮಕರಣ ಮಾಡುವುದಕ್ಕೆ ನಿರ್ಣಯ ತೆಗೆದುಕೊಳ್ಳಲಾಗಿದೆ. ಎಷ್ಟೆಲ್ಲಾ ಜನಪರ ಕಾರ್ಯಗಳನ್ನು ಮಾಡಿರುವ ಪುನೀತ್ ಅವರನ್ನು ಎಷ್ಟು ನೆನೆಸಿಕೊಂಡರೂ ಕಡಿಮೆ. ಕೇವಲ ಅವರ ಅಭಿಮಾನಿಗಳಷ್ಟೇ ಅಲ್ಲ, ಪಕ್ಕದ ಟಾಲಿವುಡ್, ಕಾಲಿವುಡ್ ಜನರು ಕೂಡ ಅಪ್ಪು ಅವರನ್ನು ನೆನೆಸುತ್ತಾರೆ.

ಇಂದಿಗೂ ದೇಶದ ಹಲವು ಕಡೆಗಳಿಂದ ಅಪ್ಪು ಅವರ ಸಮಾಧಿಗೆ ಭೇಟಿ ನೀಡಲು ಜನ ಬರುತ್ತಾರೆ. ಹಾಗೆಯೇ ಟಾಲಿವುಡ್, ಕಾಲಿವುಡ್ ನಟರು ಕೂಡ ಪುನೀತ್ ಅವರ ಮನೆಗೆ ಭೇಟಿ ನೀಡಿ, ಅವರ ಸಮಾಧಿಯ ಬಳಿ ಬಂದು ಹೋಗುತ್ತಾರೆ. ಹೌದು ಇತ್ತೀಚೆಗೆ ತಮಿಳಿನ ಖ್ಯಾತ ನಟ ಇಳಯ ದಳಪತಿ ವಿಜಯ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಭೇಟಿ ನೀಡಿದರು. ಸದ್ದಿಲ್ಲದೆ ಸಿಲಿಕಾನ್ ಸಿಟಿಗೆ ಆಗಮಿಸಿರುವ ನಟ ವಿಜಯ್ ಸೀದಾ ಕಂಠೀರವ ಸ್ಟುಡಿಯೋಗೆ ತೆರಳಿ, ಜನಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಪುನೀತ್ ಅವರ ದರ್ಶನ ಪಡೆದಿದ್ದಾರೆ. ಆ ಬಳಿಕ ಅಪ್ಪು ಅವರ ಸಮಾಧಿಗೆ ದೀಪ ಬೆಳಗಿ ಪ್ರದಕ್ಷಿಣೆ ಹಾಕಿ ನಮನ ಸಲ್ಲಿಸಿದರು. ನಾವು ಬದುಕಿದ್ದಾಗ ಮಾಡುವ ಕಾರ್ಯಗಳು, ನಾವು ಸತ್ತ ಮೇಲೂ ನಮ್ಮನ್ನು ಜೀವಂತವಾಗಿಡುತ್ತವೆ ಎಂಬುದಕ್ಕೆ ಪುನೀತ್ ಅವರೇ ಸಾಕ್ಷಿ.

%d bloggers like this: