ಕನ್ನಡ ಸಿನಿಮಾಗಳು ಇಂದು ಭಾರತದ ಎಲ್ಲಾ ಭಾಷೆಗಳಲ್ಲಿ ಬಿಡುಗಡೆ ಆಗಿ ಯಶಸ್ವಿ ಆಗುತ್ತಿವೆ. ಕನ್ನಡದ ಸಿನಿಮಾಗಳು ಯಾವ ಭಾಷೆಯ ಚಿತ್ರಗಳಿಗೂ ಕಡಿಮೆ ಇಲ್ಲ. ನಾವೂ ಕೂಡ ನೂರು ಕೋಟಿ ಬಜೆಟ್ ಸಿನಿಮಾ ಮಾಡುತ್ತೇವೆ. ಹೀಗೆ ಪುಂಕಾನುಪುಂಕ ಮಾತುಗಳನ್ನಾಡುವ ಕನ್ನಡದ ಒಂದಷ್ಟು ಸ್ಟಾರ್ ನಟ ನಟಿಯರು, ನಿರ್ದೇಶಕರು, ನಿರ್ಮಾಪಕರು ಪರಭಾಷೆ ಸಿನಿಮಾಗಳಿಂದ ಕನ್ನಡ ಭಾಷೆಗೆ ಮತ್ತು ಕನ್ನಡ ಚಿತ್ರಗಳಿಗೆ ಆಗುತ್ತಿರುವ ಅನ್ಯಾಯವನ್ನು ವಿರೋಧಿಸುತ್ತಿರುವವರು ಮಾತ್ರ ವಿರಳಾತಿ ವಿರಳ. ಹಿರಿಯ ನಟ ಜಗ್ಗೇಶ್ ಅವರು ಅನೇಕ ಬಾರಿ ಈ ಡಬ್ಬಿಂಗ್ ನಿಂದ ಕನ್ನಡ ಸಿನಿಮಾಗಳಿಗೆ ಆಗುತ್ತಿರುವ ಅನ್ಯಾಯವನ್ನು ಬಹಳ ಕಾಳಜಿಯಿಂದ ತಿಳಿ ಹೇಳಿದ್ದರು.

ಭವಿಷ್ಯದ ದಿನಗಳಲ್ಲಿ ಕನ್ನಡ ಸಿನಿಮಾಗಳಿಗೆ ಪರಭಾಷೆ ಸಿನಿಮಾಗಳಿಂದ ಯಾವ ರೀತಿ ದುಷ್ಪರಿಣಾಮ ಬೀರುತ್ತದೆ. ಕನ್ನಡ ಕಲಾವಿದರ ಬದುಕು ಹೇಗಾಗುತ್ತದೆ. ಇಂದು ನಮ್ಮಲ್ಲಿ ಕೆಲವು ನಟರು ಮಾತ್ರ ಪ್ಯಾನ್ ಇಂಡಿಯಾ ಸಿನಿಮಾ ಅಂತಾರೆ. ಆದರೆ ಎಷ್ಟು ಜನ ನಟರು ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಸಾಧ್ಯ ಎಂಬೆಲ್ಲಾ ಪ್ರಶ್ನೆಗಳನ್ನ ನಿಷ್ಠುರವಾಗಿ ಮಾತನಾಡಿದ್ದರು. ಆಗ ನಟ ಜಗ್ಗೇಶ್ ಅವರ ಮೇಲೆಯೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಿರುವ ನಟರ ಅಭಿಮಾನಿಗಳು ಮುಗಿಬಿದ್ದರು. ಅದಲ್ಲದೆ ಕೋರ್ಟ್ ನಲ್ಲಿ ಕನ್ನಡ ಡಬ್ಬಿಂಗ್ ವಿಚಾರವಾಗಿ ಡಬ್ಬಿಂಗ್ ಪರವಾಗಿ ತೀರ್ಪು ಬಂದ ನಂತರ ಯಾವ ನಟರು ಕೂಡ ಡಬ್ಬಿಂಗ್ ವಿರೋಧವಾಗಿ ಮಾತನಾಡುತ್ತಿಲ್ಲ.



ಇಂದು ನಮ್ಮ ಕನ್ನಡ ಸಿನಿಮಾಗಳಿಗೆ ಕರ್ನಾಟಕದಲ್ಲೇ ಚಿತ್ರ ಮಂದಿರಗಳಿಗೆ ಅವಕಾಶ ಸಿಗುತ್ತಿಲ್ಲ. ಅದಕ್ಕೆ ಉತ್ತಮ ಉದಾಹರಣೆಯಾಗಿ ಕನ್ನಡದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಖತ್ ಸಿನಿಮಾ. ಜೊತೆಗೆ ಪುಷ್ಪ ಚಿತ್ರ ರಿಲೀಸ್ ಆದ ಡಿಸೆಂಬರ್ 17ರಂದು ಅದೇ ದಿನ ಕನ್ನಡದ ಜನಪ್ರಿಯ ನಟಿ ಅಧಿತಿ ಪ್ರಭುದೇವ್ ಅವರ ಆನಾ ಸಿನಿಮಾಗಳಿಗೆ ಉಂಟಾದ ಥಿಯೇಟರ್ ಸಮಸ್ಯೆ. ಇದಕ್ಕೆ ನಟಿ ಅಧಿತಿ ಪ್ರಭುದೇವ ಅವರು ಕೂಡ ಅಸಮಾಧಾನ ವ್ಯಕ್ತಪಡಿಸಿದರು. ಇದೀಗ ನಟ ಗಣೇಶ್ ಕೂಡ ಧ್ವನಿ ಎತ್ತಿದ್ದಾರೆ. ಕಳೆದ ಹತ್ತನ್ನೆರಡು ವರ್ಷಗಳಿಂದ ಕನ್ನಡ ಭಾಷೆಯ ಚಿತ್ರಗಳಿಗೆ ಪರಭಾಷೆ ಸಿನಿಮಾಗಳು ಸಾಕಷ್ಟು ತೊಂದರೆ ನೀಡುತ್ತಾ ಬರುತ್ತಿವೆ.



ಕನ್ನಡ ಸಿನಿಮಾ ಮಾರುಕಟ್ಟೆ ಚಿಕ್ಕದು. ಇಲ್ಲಿ ತಯಾರಾಗುವ ಸಿನಿಮಾಗಳು ನಾಲ್ಕೈದು ಕೋಟಿಯ ಬಜೆಟ್ ಹೊಂದಿರುತ್ತವೆ. ಆದರೆ ನೂರು ಇನ್ನೂರು ಕೋಟಿ ಬಜೆಟ್ ಹೊಂದಿರುವ ಪರಭಾಷೆ ಸಿನಿಮಾಗಳು ನಮ್ಮ ರಾಜ್ಯದಲ್ಲಿ ರಿಲೀಸ್ ಆದಾಗ ಕನ್ನಡ ಚಿತ್ರಗಳಿಗೆ ಸಮಸ್ಯೆ ಆಗುತ್ತವೆ. ಸರ್ಕಾರ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಡಬೇಕು ಎಂದು ಗಣೇಶ್ ಮನವಿ ಮಾಡಿದರು. ಪರಭಾಷೆಯ ಸಿನಿಮಾಗಳು ಕನ್ನಡ ಭಾಷೆಗೆ ಡಬ್ ಆಗಿ ಕರ್ನಾಟಕದಲ್ಲಿ ರಿಲೀಸ್ ಆದರೆ ತೊಂದರೆ ಇಲ್ಲ. ಆದರೆ ಮೂಲ ಭಾಷೆಯಲ್ಲಿಯೇ ಬಹುತೇಕ ಥಿಯೇಟರ್ ಗಳಲ್ಲಿ ರಿಲೀಸ್ ಆದಲೆ ಅದು ಕನ್ನಡ ಭಾಷೆಗೆ ಮಾಡುವ ದ್ರೋಹ. ಇಲ್ಲವಾದರೆ ಒಂದು ತಿಂಗಳ ನಂತರ ಪರಭಾಷೆ ಚಿತ್ರಗಳು ರಾಜ್ಯಕ್ಕೆ ಬರಲಿ ಎಂದು ತಿಳಿಸಿದರು.