ಯೂಟ್ಯೂಬ್ ಗೂ ಕಾಲಿಟ್ಟ ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ ಅವರು

ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಸುದ್ದಿಯಲ್ಲಿರುವ ನಟಿಯೆಂದರೆ ರಶ್ಮಿಕಾ ಮಂದಣ್ಣ. ಸೆಲಿಬ್ರಿಟಿಗಳು ಎಂದರೆ ಸುದ್ದಿಯಲ್ಲಿರುವುದು ಸಾಮಾನ್ಯ. ಆದರೆ ರಶ್ಮಿಕಾ ಅವರು ಒಂದಲ್ಲ ಒಂದು ಕಾರಣಕ್ಕಾಗಿ ಸದಾ ಟ್ರೋಲ್ ಆಗುತ್ತಿರುತ್ತಾರೆ. ಇದರ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಳ್ಳದ ನಟಿ, ಟ್ರೊಲ್ ಪೇಜ್ ಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇತ್ತೀಚೆಗೆ ಒಂದಾದಮೇಲೊಂದು ಭರ್ಜರಿ ಹಿಟ್ ಚಿತ್ರಗಳನ್ನು ನೀಡುತ್ತಿರುವ ರಶ್ಮಿಕಾ ಮಂದಣ್ಣ ಅವರಿಗೆ ಸಿನಿಮಾ ಕ್ಷೇತ್ರದಲ್ಲಿ ಭಾರಿ ಬೇಡಿಕೆ ಹೆಚ್ಚಾಗಿದೆ. ಇವರು ಅಭಿನಯಿಸಿರುವ ಎಲ್ಲಾ ಚಿತ್ರಗಳು ಯಶಸ್ಸು ಕಾಣುವುದರಲ್ಲಿ ಸೋತಿಲ್ಲ. ಹೀಗಾಗಿ ನಿರ್ಮಾಪಕರು ಅವರ ಕಾಲ್ ಶೀಟ್ ಗಾಗಿ ಮನೆ ಮುಂದೆ ಕ್ಯೂ ನಿಲ್ಲುತ್ತಾರೆ. ಕನ್ನಡ, ತಮಿಳು, ತೆಲುಗು, ಹಿಂದಿ ಹೀಗೆ ತಮ್ಮ ಸಿನಿ ಪಯಣದಲ್ಲಿ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಿರುವ ರಶ್ಮಿಕಾ ಅವರಿಗೆ ದೇಶದಾದ್ಯಂತ ಅಭಿಮಾನಿಗಳಿದ್ದಾರೆ.

ಕನ್ನಡದಲ್ಲಿ ಇವರ ಮೊದಲ ಚಿತ್ರ ನೋಡಿದ ಅಭಿಮಾನಿಗಳು ಇವರನ್ನು ಕರ್ನಾಟಕದ ಕ್ರಶ್ ಎಂದು ಕರೆಯುತ್ತಿದ್ದರು. ಇದಾದ ಬಳಿಕ ಬೇರೆ ಭಾಷೆಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡ ನಟಿ ಬಾಲಿವುಡ್ ಗೂ ಕಾಲಿಟ್ಟು, ನ್ಯಾಷನಲ್ ಕ್ರಶ್ ಅನ್ನಿಸಿಕೊಂಡರು. ಈಗ ಕೇವಲ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ರಶ್ಮಿಕಾ ಅವರಿಗೆ ಅಭಿಮಾನಿಗಳು ಹೆಚ್ಚಿಕೊಂಡಿದ್ದಾರೆ. ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ ಅಥವಾ ನಟಿಯರ ಬಗ್ಗೆ ಹೆಚ್ಚು ಮಾಹಿತಿ ತಿಳಿದುಕೊಳ್ಳಬೇಕು ಎಂಬ ಕುತೂಹಲ ಇದ್ದೇ ಇರುತ್ತದೆ. ಅವರು ದಿನನಿತ್ಯ ಏನು ಮಾಡುತ್ತಾರೆ, ಅವರ ಹವ್ಯಾಸಗಳೇನು, ಬಿಡುವಿನ ಸಮಯವನ್ನು ಅವರು ಹೇಗೆ ಕರೆಯುತ್ತಾರೆ, ಅವರ ಮನೆಯಲ್ಲಿರುವ ವಸ್ತುಗಳು, ಅವರು ತಮ್ಮೊಂದಿಗೆ ದಿನನಿತ್ಯ ಬಳಸುವ ವಸ್ತುಗಳು ಹೀಗೆ ಹಲವಾರು ರೀತಿಯ ವಿಷಯಗಳನ್ನು ತಿಳಿದುಕೊಳ್ಳಲು ಅಭಿಮಾನಿಗಳು ಆಸಕ್ತರಾಗಿರುತ್ತಾರೆ.

ಇದೇ ಕಾರಣಕ್ಕೆ ಯುಟ್ಯೂಬ್ ನಲ್ಲಿ ಹಲವಾರು ಶೋಗಳು ಕೂಡ ಬಂದಿದೆ. ನಟರಾದವರ ನಿತ್ಯದ ಬದುಕು ಹೇಗಿರುತ್ತದೆ, ಅವರು ತಮ್ಮ ಕಾರಿನಲ್ಲಿ ಅಥವಾ ತಮ್ಮ ಬ್ಯಾಗಿನಲ್ಲಿ ಶೂಟಿಂಗ್ ಗಾಗಿ ಯಾವ ಯಾವ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾರೆ, ಅವರು ಉತ್ತಮ ಆರೋಗ್ಯ ಹಾಗೂ ತ್ವಚೆಯ ಬಗ್ಗೆ ಹೇಗೆ ಕಾಳಜಿವಹಿಸುತ್ತಾರೆ, ಯಾವ ಯಾವ ಪ್ರಾಡಕ್ಟ್ ಗಳನ್ನು ಯೂಸ್ ಮಾಡುತ್ತಾರೆ. ಹೀಗೆ ಹತ್ತು-ಹಲವಾರು ವಿಡಿಯೋಗಳು ಯೂಟ್ಯೂಬ್ ನಲ್ಲಿ ಸಿಗುತ್ತವೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ನಟಿ ರಶ್ಮಿಕಾ ಅವರು ತಮ್ಮ ಅಭಿಮಾನಿಗಳಿಗೆ ಹೊಸ ಸುದ್ದಿಯೊಂದನ್ನು ನೀಡಿದ್ದಾರೆ. ಅದೇನೆಂದರೆ ರಶ್ಮಿಕಾ ಅವರು ತಮ್ಮದೇ ಆದ ಸ್ವಂತ ಯುಟ್ಯೂಬ್ ಚಾನೆಲ್ ನನ್ನು ತಗೆದಿದ್ದಾರೆ. ಈಗಾಗಲೇ ಇವರಂತೆ ಹಲವಾರು ನಟಿಯರು ತಮ್ಮದೇ ಆದ ಯುಟ್ಯೂಬ್ ಚಾನಲ್ ಗಳನ್ನು ಹೊಂದಿದ್ದಾರೆ.

ರಶ್ಮಿಕಾ ಅವರ ಯೂಟ್ಯೂಬ್ ಎಂಟ್ರಿಗೆ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಇನ್ಸ್ಟಾಗ್ರಾಂ ನಲ್ಲಿ 29 ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಅನ್ನು ಹೊಂದಿರುವ ರಶ್ಮಿಕಾ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸೋಶಿಯಲ್ ಮೀಡಿಯಾ ಫಾಲೋವರ್ಸ್ ಹೊಂದಿರುವ ನಟಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಶ್ಮಿಕಾ ಅವರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಉಡುಗೆ ತೊಡುಗೆ, ಸಿನಿಮಾ, ಪ್ರವಾಸ, ಆಹಾರದ ಕುರಿತಾಗಿ ಅಪ್ಡೇಟ್ ಗಳನ್ನು ನೀಡುತ್ತಿರುತ್ತಾರೆ.

ರಶ್ಮಿಕಾ ಹಾಗೂ ಸಿದ್ಧಾರ್ಥ್ ಮಲ್ಹೋತ್ರ ಅಭಿನಯದ ಮಿಷನ್ ಮಜ್ನು ಚಿತ್ರ ಜೂನ್ 10 ರಂದು ತೆರೆ ಕಾಣಲಿದ್ದು, ಇದಾದ ಬಳಿಕ ವಿಕಾಸ್ ಬಹ್ಲ್ ಅವರ ಗುಡ್ ಬೈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿ ಹರಡಿದೆ. ತಮ್ಮ ಯುಟ್ಯೂಬ್ ಚಾನೆಲ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡ ರಶ್ಮಿಕಾ ಅವರು ನೋ ಮೋರ್ ಅಬೌಟ್ ಮಿ, ಮೇ ಬಿ ಎನ್ನುವ ಶೀರ್ಷಿಕೆಯೊಂದಿಗೆ ಸಂಕ್ಷಿಪ್ತ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಕೆಲವು ವೈಯಕ್ತಿಕ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಕಾಣಬಹುದು. ಮುಂಬರುವ ದಿನಗಳಲ್ಲಿ ಅವರ ಚಾನೆಲ್ನಲ್ಲಿ ಏನೆಲ್ಲ ಇರಬಹುದು ಎನ್ನುವುದರ ಕುರಿತಾದ ಇಣುಕು ನೋಟವನ್ನು ಈ ವಿಡಿಯೋ ನೀಡುತ್ತದೆ.

%d bloggers like this: